‘ಪ್ರಶ್ನಿಸಿದರೆ ವಿದೇಶಿ ಏಜೆಂಟ್ ಎಂಬ ಹಣೆಪಟ್ಟಿ’: ಅಣ್ಣಾಮಲೈ ಆರೋಪಕ್ಕೆ ಬಿಜೆಪಿಯಿಂದ ತಿರುಗೇಟು
ಪಕ್ಷ ತೊರೆದ ಬಳಿಕ ನಿಲುವು ಬದಲಿಸಿದ ಆರೋಪ

Photo: PTI
ಹೊಸದಿಲ್ಲಿ: ‘ಕಾನೂನು ಪ್ರಕ್ರಿಯೆಯ ಉಲ್ಲಂಘನೆಯನ್ನು ಪ್ರಶ್ನಿಸಿದರೆ ವಿದೇಶಿ ಏಜೆಂಟ್ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ’ ಎಂದು ಆರೋಪಿಸಿರುವ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರ ಬಂಧನ ಹಾಗೂ ದಿಲ್ಲಿ ಪೊಲೀಸರ ಕ್ರಮದ ಕುರಿತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಪ್ರತಿಭಟನೆಯ ವಿಧಾನಗಳನ್ನು ಒಪ್ಪದಿದ್ದರೂ, ಪ್ರತಿಭಟಿಸುವುದು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಸಿಜೆಪಿಯ ಪ್ರಜಾಸತ್ತಾತ್ಮಕ ಹಕ್ಕು ಎಂದು ಪ್ರತಿಪಾದಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಅಣ್ಣಾಮಲೈ ಪಕ್ಷ ತೊರೆದ ಬಳಿಕ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ ಎಂದು ಟೀಕಿಸಿದೆ.
‘ಪ್ರಜಾಪ್ರಭುತ್ವದಲ್ಲಿ ಕಾನೂನು ಪ್ರಕ್ರಿಯೆಯ ಉಲ್ಲಂಘನೆಯನ್ನು ಪ್ರಶ್ನಿಸಿದರೆ, ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ನಿಮ್ಮನ್ನು ‘ವಿದೇಶಿ ಏಜೆಂಟ್’ ಎಂದು ಹಣೆಪಟ್ಟಿ ಕಟ್ಟುವುದೂ ಸೇರಿದಂತೆ ಹಲವು ರೀತಿಯ ದಾಳಿಗಳನ್ನು ಎದುರಿಸಬೇಕಾಗುತ್ತದೆ’ ಎಂದು ಅಣ್ಣಾಮಲೈ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಸಿಜೆಪಿ ವಿರುದ್ಧ ದಿಲ್ಲಿ ಪೊಲೀಸರು ಕೈಗೊಂಡ ಕ್ರಮವನ್ನು ‘ನಿಜವಾದ ಅಪಚಾರ’ ಎಂದು ಕರೆದ ಮರುದಿನವೇ ಅವರು ಈ ಹೇಳಿಕೆ ನೀಡಿದ್ದಾರೆ. ಸಿಜೆಪಿಯ ಪ್ರತಿಭಟನಾ ವಿಧಾನಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ, ಅದರ ಹಕ್ಕುಗಳನ್ನು ನಿರಾಕರಿಸಲಾಗದು ಎಂಬುದು ಅಣ್ಣಾಮಲೈ ಅವರು ತಮ್ಮ ನಿಲುವನ್ನು ಬಹಿರಂಗಪಡಿಸಿದ್ದಾರೆ.
‘ಬಿಜೆಪಿಯಲ್ಲಿರುವ ಕೆಲವರಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನಿಮಗೆ ಅನುಕೂಲವಾದಾಗ ವಿಷಯಗಳನ್ನು ಮರೆತುಬಿಡುವ ಅಥವಾ ಕಡೆಗಣಿಸುವ ಅಭ್ಯಾಸವಿದ್ದರೆ, ಇದನ್ನು ನೆನಪಿಡಿ. ನಾನು 2026ರ ಜೂನ್ 5ರಂದು ಬಿಜೆಪಿಯಿಂದ ಹೊರಬಂದಿದ್ದೇನೆ. ಸಿಜೆಪಿಯ ಪ್ರತಿಭಟನಾ ವಿಧಾನಗಳನ್ನು ನಾನು ಒಪ್ಪುವುದಿಲ್ಲ. ಅದರ ಹಲವು ಕ್ರಮಗಳು ತಪ್ಪಾದ ದಿಕ್ಕಿನಲ್ಲಿವೆ ಎಂದು ನನಗನ್ನಿಸುತ್ತದೆ. ಆದರೆ, ತಮಗೆ ಮುಖ್ಯವೆನಿಸುವ ವಿಷಯದ ಬಗ್ಗೆ ಪ್ರತಿಭಟಿಸಲು, ವಾದಿಸಲು ಅಥವಾ ಹೋರಾಡಲು ಅವರಿಗೆ ಹಕ್ಕಿದೆಯೇ ಎಂದು ಕೇಳಿದರೆ, ಖಂಡಿತವಾಗಿಯೂ ‘ಹೌದು’ ಎಂದು ಹೇಳುತ್ತೇನೆ’ ಎಂದು ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಸಿಜೆಪಿ ನಾಯಕರ ಬಂಧನ ಮತ್ತು ಪ್ರತಿಭಟನೆಗೆ ಸಂಬಂಧಿಸಿದಂತೆ ಅಣ್ಣಾಮಲೈ ಕೇಂದ್ರ ಸರ್ಕಾರದ ಮುಂದೆ ಐದು ಪ್ರಶ್ನೆಗಳನ್ನು ಇಟ್ಟಿದ್ದಾರೆ. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿದ ಕ್ರಮ, ‘ಸ್ಪೆಷಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್’ ಆಗಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳ ಅಧಿಕಾರ ವ್ಯಾಪ್ತಿ, ಅಕ್ಟೋಬರ್ 13ರಂದು ಬಂಧಿತರಾದ ಸಿಜೆಪಿ ಸದಸ್ಯರ ಜಾಮೀನು ವಿಚಾರಣೆ ಮತ್ತು ಎಂಟು ಜಾಮೀನುದಾರರನ್ನು ತಿರಸ್ಕರಿಸಿದ ಕ್ರಮದ ಕುರಿತು ಸ್ಪಷ್ಟನೆ ಕೋರಿದ್ದಾರೆ.
ಇದರ ಜತೆಗೆ, NEET ಪ್ರತಿಭಟನೆಗಳ ಸಂದರ್ಭದಲ್ಲಿ ಪೆಲೆಟ್ ಗನ್ ಗಳ ಬಳಕೆ ಹಾಗೂ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (SOP) ಉಲ್ಲಂಘನೆ ಬಗ್ಗೆಯೂ ಪ್ರಶ್ನಿಸಿದ್ದಾರೆ.
ಸಿಜೆಪಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಮನವಿ ಸಲ್ಲಿಸಿದ ಬಳಿಕ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಹೇಗೆ ತೆಗೆದುಹಾಕಲಾಯಿತು ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ. ಪ್ರಕರಣ ಹೈಕೋರ್ಟ್ಗೆ ತಲುಪಿದ ಬಳಿಕ ಬಂಧಿತ ಸಿಜೆಪಿ ಪದಾಧಿಕಾರಿಗಳನ್ನು ‘ಸ್ಪೆಷಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್’ ಬಿಡುಗಡೆ ಮಾಡಿದರು ಎಂದೂ ತಿಳಿಸಿದ್ದಾರೆ.
‘ಬಿಜೆಪಿ ನಿಜವಾಗಿಯೂ ಸಿಜೆಪಿಯನ್ನು ವಿರೋಧಿಸುತ್ತಿದೆಯೇ ಅಥವಾ ಅದಕ್ಕೆ ಉಚಿತ ಪ್ರಚಾರ ನೀಡುತ್ತಿದೆಯೇ? ಸಿಜೆಪಿಯನ್ನು ಪ್ರಮುಖ ರಾಜಕೀಯ ಶಕ್ತಿಯಂತೆ ಬಿಂಬಿಸುವ ಮೂಲಕ ವಿರೋಧ ಪಕ್ಷಗಳ ಮತಗಳನ್ನು ವಿಭಜಿಸಲು ಬಿಜೆಪಿ ಬಯಸುತ್ತಿದೆಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ಸಿಜೆಪಿ ಹಣ ಕೊಟ್ಟು ಪ್ರಚಾರ ಪಡೆಯಲು ಮುಂದಾಗಿದ್ದರೂ, ಅದಕ್ಕೆ ಇಷ್ಟೊಂದು ಉತ್ತಮ ಪ್ರಚಾರ ತಂಡ ಸಿಗುತ್ತಿರಲಿಲ್ಲ’ ಎಂದು ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
SIR ವಿಚಾರದಲ್ಲಿ ದ್ವಂದ್ವ ನಿಲುವಿನ ಆರೋಪ
ಅಣ್ಣಾಮಲೈ ಅವರ ಆರೋಪಗಳಿಗೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದೆ. ಪಕ್ಷದ ತಮಿಳುನಾಡು ಘಟಕದ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ, ಅಣ್ಣಾಮಲೈ ಬಿಜೆಪಿಯಿಂದ ಹೊರಬಂದ ಬಳಿಕ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಪ್ರಕ್ರಿಯೆಯನ್ನು ಅಣ್ಣಾಮಲೈ ಹಿಂದೆ ಸಮರ್ಥಿಸಿಕೊಂಡಿದ್ದರು ಎಂದು ತಿರುಪತಿ ಹೇಳಿದ್ದಾರೆ. ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ಮತದಾರರಿದ್ದು, ಅವರನ್ನು ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಅಣ್ಣಾಮಲೈ ಪ್ರತಿಪಾದಿಸಿದ್ದರು. ಈ ಪ್ರಕ್ರಿಯೆಯನ್ನು ವಿರೋಧಿಸಿದ್ದಕ್ಕಾಗಿ DMKಯನ್ನೂ ಟೀಕಿಸಿದ್ದರು ಎಂದು ಅವರು ನೆನಪಿಸಿದ್ದಾರೆ.
2026ರ ಮೇನಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೊಂದಿಗೆ ಅಣ್ಣಾಮಲೈ ನಡೆಸಿದ ಸಾರ್ವಜನಿಕ ಚರ್ಚೆಯನ್ನೂ ತಿರುಪತಿ ಉಲ್ಲೇಖಿಸಿದ್ದಾರೆ. ಆಗ ಬಿಜೆಪಿಯಲ್ಲಿದ್ದ ಅಣ್ಣಾಮಲೈ, ಮತದಾರರ ಪಟ್ಟಿ ಪರಿಷ್ಕರಣೆ ನ್ಯಾಯಸಮ್ಮತ ಮತ್ತು ಅಗತ್ಯವಾದ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡಿದ್ದರು. ಈ ವಿಷಯದಲ್ಲಿ ವಿರೋಧ ಪಕ್ಷಗಳು ದ್ವಂದ್ವ ನಿಲುವು ಹೊಂದಿವೆ ಎಂದೂ ಟೀಕಿಸಿದ್ದರು ಎಂದು ಅವರು ಹೇಳಿದ್ದಾರೆ.
‘ಬಿಜೆಪಿಯಿಂದ ಹೊರಬಂದ ಬಳಿಕ ಅದೇ ಅಣ್ಣಾಮಲೈ ಈಗ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ’ ಎಂದು ತಿರುಪತಿ ಹೇಳಿದ್ದಾರೆ. ಸಿಜೆಪಿ ಮತ್ತು ಕಾಂಗ್ರೆಸ್ ವ್ಯಕ್ತಪಡಿಸಿರುವ ಕಳವಳಗಳನ್ನು ಅಣ್ಣಾಮಲೈ ಈಗ ಏಕೆ ಬೆಂಬಲಿಸುತ್ತಿದ್ದಾರೆ ಎಂದೂ ಪ್ರಶ್ನಿಸಿದ್ದಾರೆ.
ಪೊಲೀಸರ ಕ್ರಮಕ್ಕೆ ಬಿಜೆಪಿ ಸಮರ್ಥನೆ
ಪ್ರತಿಭಟನೆಗಳನ್ನು ದಿಲ್ಲಿ ಪೊಲೀಸರು ನಿರ್ವಹಿಸಿದ ರೀತಿಯನ್ನು ಪ್ರಶ್ನಿಸಿರುವ ಅಣ್ಣಾಮಲೈ ಅವರನ್ನು ಬಿಜೆಪಿ ವಕ್ತಾರರು ಟೀಕಿಸಿದ್ದಾರೆ. ಪ್ರತಿಭಟನೆಗಳು ಕಾನೂನಿನ ಮಿತಿಯನ್ನು ಮೀರಿದಾಗ ಅಥವಾ ಸ್ಥಳದಿಂದ ತೆರಳುವಂತೆ ಸೂಚಿಸಿದ ಬಳಿಕವೂ ಪ್ರತಿಭಟನಾಕಾರರು ಮುಂದುವರಿದಾಗ ಪೊಲೀಸರು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ತಿರುಪತಿ ವಾದಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಗತ್ಯತೆಯ ಅರಿವಿದೆ. ಹೀಗಿದ್ದರೂ ಪೊಲೀಸರ ವಿರುದ್ಧ ಅವರು ಮಾಡಿರುವ ಟೀಕೆಗಳು ಅವರ ಹಿಂದಿನ ಜವಾಬ್ದಾರಿಗಳಿಗೆ ವಿರುದ್ಧವಾಗಿವೆ ಎಂದು ತಿರುಪತಿ ಹೇಳಿದ್ದಾರೆ.
‘ಒಬ್ಬ ವ್ಯಕ್ತಿ ಪೊಲೀಸ್ ಅಧಿಕಾರಿಯಾಗಿಯೂ ಹಿರಿಯ ರಾಜಕೀಯ ನಾಯಕರಾಗಿಯೂ ಸೇವೆ ಸಲ್ಲಿಸಿರುವಾಗ, ಅವರ ನಿಲುವಿನಲ್ಲಿ ಸ್ಥಿರತೆ ಇರುವುದು ಮುಖ್ಯ’ ಎಂದು ಅವರು ಹೇಳಿದ್ದಾರೆ.






