ಲಡಾಖ್| ಪ್ರತಿಭಟನಾ ಸ್ಥಳದಿಂದ ಸೋನಂ ವಾಂಗ್ಚುಕ್ರನ್ನು ಕರೆದೊಯ್ದ ಪೊಲೀಸರು

ಸೋನಂ ವಾಂಗ್ಚುಕ್ |Credit: X/@Sonamwangchuk
ಲಡಾಖ್: ಲಡಾಖ್ನ ಲೇಹ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಬುಧವಾರ ಪೊಲೀಸರು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ, ಅವರ ನಿವಾಸಕ್ಕೆ ಕರೆದೊಯ್ದಿದ್ದಾರೆ. ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ಮತ್ತು ಪ್ರತಿಭಟನೆಗಳಿಗೆ ನಿಷೇಧ ವಿಧಿಸಿರುವುದಾಗಿ ಪೊಲೀಸರು ಅವರಿಗೆ ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಮತ್ತು ಲೇಹ್ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲೇಹ್ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ರ್ಯಾಲಿ, ಪ್ರತಿಭಟನೆ ಹಾಗೂ ಇತರ ಸಭೆಗಳನ್ನು ನಡೆಸುವುದನ್ನು ಆದೇಶದ ಮೂಲಕ ನಿಷೇಧಿಸಲಾಗಿದೆ.
“ಸೋನಂ ವಾಂಗ್ಚುಕ್ ಅವರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯಲು ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಪಂಚಾಯತ್, ಪುರಸಭೆ ಹಾಗೂ ಲಡಾಖ್ ಸ್ವಾಯತ್ತ ಬೆಟ್ಟಾಭಿವೃದ್ಧಿ ಮಂಡಳಿ(LAHDC) ಚುನಾವಣೆಗಳ ಹಿನ್ನೆಲೆಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಪಾಲಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಪೊಲೀಸರ ಕ್ರಮದ ಬಳಿಕ ಸೋನಂ ವಾಂಗ್ಚುಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೊ ಸಂದೇಶವೊಂದನ್ನು ಪ್ರಕಟಿಸಿದ್ದಾರೆ. ಲಡಾಖ್ನ ಪರಿಸ್ಥಿತಿಯಲ್ಲಿ ಮಧ್ಯಪ್ರವೇಶಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
‘ದೇಶಕ್ಕೆ ಲಡಾಖ್ನ ತುರ್ತು ಮನವಿ’ ಎಂಬ ಶೀರ್ಷಿಕೆಯ ವಿಡಿಯೋ ಸಂದೇಶದಲ್ಲಿ, 2025ರ ಸೆಪ್ಟೆಂಬರ್ 24ರಂದು ಲೇಹ್ನಲ್ಲಿ ನಡೆದ ಘಟನೆಗಳ ಕುರಿತು ನಡೆಯುತ್ತಿರುವ ನ್ಯಾಯಾಂಗ ತನಿಖೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ವಾಂಗ್ಚುಕ್ ಆರೋಪಿಸಿದ್ದಾರೆ. ಅಲ್ಲದೆ, ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕುರಿತು ನಡೆಯುತ್ತಿದ್ದ ಮಾತುಕತೆಗಳು ಸ್ಥಗಿತಗೊಂಡಿವೆ ಎಂದೂ ಅವರು ಹೇಳಿದ್ದಾರೆ.






