ಭಾರತಕ್ಕೆ ರಷ್ಯಾದಿಂದ ಅತ್ಯಧಿಕ ಕಚ್ಚಾತೈಲ ಆಮದು

ಸಾಂದರ್ಭಿಕ ಚಿತ್ರ Photo: magnific
ಹೊಸದಿಲ್ಲಿ: ಎಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಅತ್ಯಧಿಕ ಕಚ್ಚಾ ತೈಲ ರಫ್ತು ಮಾಡಿದ ದೇಶವಾಗಿ ರಷ್ಯಾ ಹೊರಹೊಮ್ಮಿದೆ. ಎಪ್ರಿಲ್ನಲ್ಲಿ ದಿನಕ್ಕೆ 1.6 ದಶಲಕ್ಷ ಬ್ಯಾರಲ್ (ಎಂಬಿಡಿ) ಕಚ್ಚಾ ತೈಲವನ್ನು ರಷ್ಯಾ ರಫ್ತು ಮಾಡಿದೆ. ಸೌದಿ ಅರೇಬಿಯಾ, ಯುಎಇ, ವೆನೆಜುವೆಲಾ ಮತ್ತು ಖತರ್ ನಂತರದ ಸ್ಥಾನಗಳಲ್ಲಿವೆ ಎಂದು ಶಿಪ್ಮೆಂಟ್ ಟ್ರ್ಯಾಕಿಂಗ್ ಸಂಸ್ಥೆ ಕೆಪ್ಲರ್ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಭಾರತ ಎಪ್ರಿಲ್ ತಿಂಗಳಲ್ಲಿ 4.4 ಎಂಬಿಡಿ ಕಚ್ಚಾತೈಲ ಆಮದು ಮಾಡಿಕೊಂಡಿದ್ದು, ಇದು ಮಾರ್ಚ್ (4.5 ಎಂಬಿಡಿ) ನಲ್ಲಿ ಆಮದು ಮಾಡಿಕೊಂಡ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ. ಅಂತೆಯೇ ಫೆಬ್ರವರಿಯಲ್ಲಿ ಆಮದು ಮಾಡಿಕೊಂಡ 5.2 ಎಂಬಿಡಿಗೆ ಹೋಲಿಸಿದರೆ ಶೇಕಡ 85ರಷ್ಟಾಗಿದೆ. ಹಾರ್ಮುಝ್ ಜಲಸಂಧಿಯಲ್ಲಿ ಸಂಚಾರ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ರಷ್ಯಾದಿಂದ ಆಗುತ್ತಿರುವ ಸರಬರಾಜು ಮಾರ್ಚ್ ಗೆ ಹೋಲಿಸಿದರೆ ಶೇಕಡ 20ರಷ್ಟು ಅಂದರೆ 2ಎಂಬಿಡಿಯಷ್ಟು ಕಡಿಮೆ. ಕಳೆದ ಮೇ ತಿಂಗಳಲ್ಲಿ ಅತ್ಯಧಿಕ ಆಮದು ಮಾಡಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ರಷ್ಯಾದಿಂದ ಅತ್ಯಧಿಕ ತೈಲ ಆಮದು ಆಗಿತ್ತು. ಸೌದಿ ಅರೇಬಿಯಾ (ದಿನಕ್ಕೆ 6.85 ಲಕ್ಷ ಬ್ಯಾರಲ್), ಯುಎಇ (5.74 ಲಕ್ಷ ಬ್ಯಾರಲ್) ಕೂಡಾ ಪೂರೈಕೆಯನ್ನು ಸುಧಾರಿಸಿವೆ. ವೆನೆಜುವೆಲಾದಿಂದ ತೈಲ ಆಮದನ್ನು ಭಾರತ ಪುನರಾರಂಭಿಸಿದ್ದು, ಪಶ್ಚಿಮ ಏಷ್ಯಾ ದೇಶಗಳಿಂದ ಪೂರೈಕೆ ವ್ಯತ್ಯಯವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ಈ ಅವಧಿಯಲ್ಲಿ ಇರಾಕ್, ಕುವೈತ್, ಖತರ್ ಅಥವಾ ಸೌದಿ-ಕುವೈತ್ ತಟಸ್ಥ ವಲಯದಿಂದ ಕಚ್ಚಾತೈಲ ಪೂರೈಕೆಯಾಗಿಲ್ಲ. ಸಾಂಪ್ರದಾಯಿಕವಾಗಿ ಇರಾಕ್ ಭಾರತಕ್ಕೆ ಅತ್ಯಧಿಕ ಕಚ್ಚಾತೈಲ ಪೂರೈಸುವ ದೇಶಗಳ ಪೈಕಿ ಒಂದಾಗಿದೆ. ಸೌದಿ ಅರೇಬಿಯಾ ಪೂರ್ವ-ಪಶ್ಚಿಮ ಕಚ್ಚಾ ತೈಲ ಪೈಪ್ ಲೈನ್ ಮೂಲಕ ಪೂರೈಕೆ ಮಾಡಿದ್ದರೆ, ಯುಎಇ ಎಡಿಸಿಓಪಿ ಪೈಪ್ ಲೈನ್ ಮೂಲಕ ಒಮಾನ್ ನ ಫುಜೈರ್ ಗೆ ಕಳುಹಿಸಿ ಅಲ್ಲಿಂದ ಸರಬರಾಜು ಮಾಡಿದೆ. ಕೊಲ್ಲಿ ದೇಶಗಳ ಬಹುತೇಕ ಪೂರೈಕೆ ಹಾರ್ಮುಝ್ ಜಲಸಂಧಿಯನ್ನು ಅವಲಂಬಿಸಿದೆ.




