2,000 ರೂ. ನೋಟುಗಳನ್ನು ವಿನಿಮಯಿಸಿಕೊಳ್ಳಲು ಇಂದು (ಸೆ.30) ಕೊನೆಯ ದಿನ, ಇಲ್ಲದಿದ್ದರೆ ಏನಾಗುತ್ತದೆ?

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2,000 ರೂ.ಮುಖಬೆಲೆಯ ನೋಟುಗಳನ್ನು ಮರಳಿಸಲು ಅಥವಾ ವಿನಿಮಯಿಸಿಕೊಳ್ಳಲು ಇಂದು ಕೊನೆಯ ದಿನಾಂಕವಾಗಿದೆ. ಆರ್ಬಿಐ ತಿಳಿಸಿರುವಂತೆ ಅ.1ರಿಂದ ಈ ನೋಟು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ಕೇವಲ ಇನ್ನೊಂದು ಕಾಗದದ ತುಂಡಾಗಲಿದೆ. ಅ.1ರಿಂದ 2,000 ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಾಗಿ ಆರ್ಬಿಐ ನಾಲ್ಕು ತಿಂಗಳುಗಳ ಹಿಂದೆಯೇ ಪ್ರಕಟಿಸಿತ್ತು.
ವರದಿಯಾಗಿರುವಂತೆ ಸೆ.30ರ ಗಡುವಿನ ಬಳಿಕ 2,000 ನೋಟು ಕಾನೂನುಬದ್ಧವಾಗಿ ಮುಂದುವರಿಯುತ್ತದೆ, ಆದರೆ ವಹಿವಾಟುಗಳಿಗೆ ಅದನ್ನು ಸ್ವೀಕರಿಸಲಾಗುವುದಿಲ್ಲ. ಗಡುವಿನ ಬಳಿಕ ಈ ನೋಟುಗಳನ್ನು ಆರ್ಬಿಐನಲ್ಲಿ ಮಾತ್ರ ವಿನಿಮಯಿಸಿಕೊಳ್ಳಬಹುದು.
2,000 ನೋಟನ್ನು ಬದಲಿಸಿಕೊಳ್ಳುವುದು ಹೇಗೆ?
ಸೆ.30ರವರೆಗೆ 2,000 ಕರೆನ್ಸಿ ನೋಟುಗಳನ್ನು ಆರ್ಬಿಐನ 19 ಪ್ರಾದೇಶಿಕ ಕಚೇರಿಗಳು ಅಥವಾ ಸಮೀಪದ ಯಾವುದೇ ಬ್ಯಾಂಕ್ ಶಾಖೆಯಲ್ಲಿ ವಿನಿಮಯಿಸಿಕೊಳ್ಳಬಹುದು. ಅಲ್ಲಿ ಲಭ್ಯವಿರುವ ರಿಕ್ವೆಸ್ಟ್ ಸ್ಲಿಪ್ನಲ್ಲಿ ನಿಮ್ಮ ಆಧಾರ್ ಸಂಖ್ಯೆ,ವಾಹನ ಚಾಲನಾ ಪರವಾನಿಗೆ,ಮತದಾರರ ಗುರುತಿನ ಚೀಟಿ,ಪಾಸ್ಪೋರ್ಟ್ ಅಥವಾ ನರೇಗಾ ಕಾರ್ಡ್ ಸೇರಿದಂತೆ ನಿಮ್ಮ ವಿವರಗಳನ್ನು ತುಂಬಿ. ನೀವು ಎಷ್ಟು ನೋಟುಗಳನ್ನು ಸಲ್ಲಿಸುತ್ತಿದ್ದೀರಿ ಎನ್ನುವುದನ್ನು ನಮೂದಿಸಿ. ಒಂದು ಸಲಕ್ಕೆ ವಿನಿಮಯಿಸಿಕೊಳ್ಳಬಹುದಾದ 2,000 ರೂ.ನೋಟುಗಳ ಮೊತ್ತಕ್ಕೆ 20,000 ರೂ.ಗಳ ಮಿತಿಯಿದೆ ಎನ್ನುವುದು ಗಮನದಲ್ಲಿರಲಿ.







