ತಾಂತ್ರಿಕ ದೋಷ: ಆ್ಯಕ್ಸಿಯೋಮ್-4 ಮಿಷನ್ ಉಡಾವಣೆ ಮುಂದೂಡಿಕೆ

PC : X \ @airnewsalerts
ಹೊಸದಿಲ್ಲಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಹೊತ್ತೊಯ್ಯಬೇಕಿದ್ದ ಆ್ಯಕ್ಸಿಯಮ್-4 ಮಿಷನ್ ಉಡಾವಣೆಯನ್ನು ರಾಕೆಟ್ನಲ್ಲಿ ಕಂಡುಬಂದ ತಾಂತ್ರಿಕ ದೋಷದ ಕಾರಣಕ್ಕೆ ಮುಂದಕ್ಕೆ ಹಾಕಲಾಗಿದೆ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮೂಲಗಳು ಹೇಳಿವೆ.
ಈ ಮಿಷನ್ ಅಡಿಯಲ್ಲಿ ಗಗನಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊತ್ತೊಯ್ಯಬೇಕಿದ್ದ ಸ್ಪೇಸ್ಎಕ್ಸ್ ನ ಫಾಲ್ಕನ್-9 ರಾಕೆಟ್ನ ತಾಂತ್ರಿಕ ದೋಷವನ್ನು ಸರಿಪಡಿಸಲು ಹೆಚ್ಚುವರಿ ಸಮಯದ ಅಗತ್ಯವಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಲಾಗಿದೆ. ರಾಕೆಟ್ನ ಪೋಸ್ಟ್ ಸ್ಟ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆ ವೇಳೆ ಎಲ್ಓಎಕ್ಸ್ ಸೋರಿಕೆ ಪತ್ತೆಯಾಗಿದ್ದು, ಇದನ್ನು ದುರಸ್ತಿಪಡಿಸಬೇಕಿದೆ.
"ಸ್ಪೇಸ್ಎಕ್ಸ್ ತಂಡಕ್ಕೆ ರಾಕೆಟ್ನ ಪೋಸ್ಟ್ ಸ್ಟ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆ ವೇಳೆ ಪತ್ತೆಯಾದ ಎಲ್ಓಎಕ್ಸ್ ಸೋರಿಕೆ ದುರಸ್ತಿಗೆ ಹೆಚ್ಚುವರಿ ಸಮಯ ಬೇಕಿದ್ದ ಕಾರಣ ನಾಳೆ ನಡೆಯಬೇಕಿದ್ದ ಎಎಕ್ಸ್-4ನ ಫಾಲ್ಕನ್ 9 ಉಡಾವಣೆಯಿಂದ ಹಿಂದೆ ಸರಿಯಬೇಕಿದೆ. ಇದು ಪೂರ್ಣಗೊಂಡ ಬಳಿಕ ಹೊಸ ಉಡಾವಣೆ ದಿನಾಂಕ ಪ್ರಕಟಿಸಲಾಗುವುದು" ಎಂದು ಸ್ಪೇಸ್ ಎಕ್ಸ್ ಸ್ಪಷ್ಟಪಡಿಸಿದೆ.
ಭಾರತದ ಮೊಟ್ಟಮೊದಲ ಗಗನಯಾತ್ರಿಯನ್ನು ಹೊತ್ತೊಯ್ಯಬೇಕಿದ್ದ ಆ್ಯಕ್ಸಿಯಮ್ 04 ಮಿಷನ್ ಉಡಾವಣೆಗೆ 11ನೇ ಜೂನ್ 2025ರ ದಿನಾಂಕ ನಿಗದಿಪಡಿಸಲಾಗಿತ್ತು. ಅದರೆ ಇದನ್ನು ಮುಂದೂಡಲಾಗಿದೆ. ಫಾಲ್ಕನ್ 9 ಉಡಾವಣಾ ವಾಹಕದ ಬೂಸ್ಟರ್ ಸ್ಟೇಜ್ ಕ್ಷಮತೆಯನ್ನು ದೃಢಪಡಿಸಲು ಉಡಾವಣಾ ವಾಹಕ ಸಿದ್ಧತೆಯ ವೇಳೆ ಏಳು ಸೆಕೆಂಡ್ಗಳ ಉಷ್ಣ ಪರೀಕ್ಷೆಯನ್ನು ನಡೆಸಲಾಯಿತು ಎಂದು ಇಸ್ರೋ ವಿವರಣೆ ನೀಡಿದೆ.