JD(U) ಪಕ್ಷವನ್ನು ‘ಜನತಾದಳ (ನಿತೀಶ್)’ ಎಂದು ಮರುನಾಮಕರಣ ಮಾಡಲು ನಾಯಕರ ಬೇಡಿಕೆ: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಬೆಂಬಲ
ರಾಮ್ ವಿಲಾಸ್ ಪಾಸ್ವಾನ್ ಪ್ರತಿಮೆ ಸ್ಥಾಪನೆಗೆ ಚಿರಾಗ್ ಒತ್ತಾಯ

ನಿತೀಶ್ ಕುಮಾರ್ (Photo Credit | PTI)
ಪಾಟ್ನಾ: ಎನ್ಡಿಎ ಮೈತ್ರಿಕೂಟದ ಪಾಲುದಾರ ಪಕ್ಷವಾದ ಹಿಂದೂಸ್ತಾನ್ ಅವಾಮ್ ಮೋರ್ಚಾ (HAM), ನಿತೀಶ್ ಕುಮಾರ್ ಅವರ ಜನ್ಮಸ್ಥಳ ‘ಭಕ್ತಿಯಾರ್ಪುರ’ವನ್ನು ‘ನಿತೀಶ್ಪುರ’ ಎಂದು ಮರುನಾಮಕರಣ ಮಾಡಬೇಕೆಂದು ಇತ್ತೀಚೆಗೆ ಪ್ರಸ್ತಾಪಿಸಿತ್ತು.
ಇದರ ಬೆನ್ನಲ್ಲೇ, ಜನತಾದಳ (ಯುನೈಟೆಡ್) ಪಕ್ಷವನ್ನು ‘ಜನತಾದಳ (ನಿತೀಶ್)’ ಎಂದು ಮರುನಾಮಕರಣ ಮಾಡಬೇಕೆಂಬ ಹೊಸ ಪ್ರಸ್ತಾಪವನ್ನು ಜೆಡಿಯು ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಝಾ ಮುನ್ನೆಲೆಗೆ ತಂದಿದ್ದಾರೆ. ಪಕ್ಷ ಆರಂಭವಾದಾಗಿನಿಂದ ಹೆಮ್ಮರವಾಗಿ ಬೆಳೆಯಲು ನಿತೀಶ್ ಕುಮಾರ್ ಅವರೇ ಕಾರಣ ಎಂದು ಅವರು ಪ್ರತಿಪಾದಿಸಿದ್ದಾರೆ.
ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಪುತ್ರ ಹಾಗೂ HAM ಅಧ್ಯಕ್ಷ ಸಂತೋಷ್ ಸುಮನ್ ಅವರು ‘ಭಕ್ತಿಯಾರ್ಪುರ’ವನ್ನು ‘ನಿತೀಶ್ಪುರ’ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
“ಭಕ್ತಿಯಾರ್ಪುರಕ್ಕೆ ಖಿಲ್ಜಿಯ ಹೆಸರನ್ನು ಎಂದಿಗೂ ಇಡಬಾರದಿತ್ತು. ಬಿಹಾರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ ಮಾಜಿ ಮುಖ್ಯಮಂತ್ರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಊರಿಗೆ ‘ನಿತೀಶ್ಪುರ’ ಎಂದು ಮರುನಾಮಕರಣ ಮಾಡಲು ಇದು ಸಕಾಲ” ಎಂದು ಸಂತೋಷ್ ಸುಮನ್ ಹೇಳಿದ್ದರು.
ಬಿಹಾರ ಸರ್ಕಾರದ ಸಂಪುಟದ ಹಿರಿಯ ಸಚಿವ ಶ್ರವಣ್ ಕುಮಾರ್ ಅವರು ಸಂಜಯ್ ಝಾ ಅವರ ಸಲಹೆಯನ್ನು ಸ್ವಾಗತಿಸಿದ್ದಾರೆ.
“ನಿತೀಶ್ ಜೀ ಪಕ್ಷದ ಪ್ರಶ್ನಾತೀತ ಹಾಗೂ ಅತ್ಯುನ್ನತ ನಾಯಕರಾಗಿದ್ದಾರೆ. ಜೆಡಿಯು ಅನ್ನು ಆದಷ್ಟು ಬೇಗ ಜೆಡಿ(ನಿತೀಶ್) ಎಂದು ಮರುನಾಮಕರಣ ಮಾಡಬೇಕು” ಎಂದು ಶ್ರವಣ್ ಕುಮಾರ್ ಆಗ್ರಹಿಸಿದ್ದಾರೆ.
ಶ್ರವಣ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ ಬಳಿಕ ಜೆಡಿಯು ಪಕ್ಷದ ಹಲವು ನಾಯಕರು ಪಕ್ಷವನ್ನು ಜೆಡಿ(ನಿತೀಶ್) ಎಂದು ಮರುನಾಮಕರಣ ಮಾಡುವ ಪ್ರಸ್ತಾಪಕ್ಕೆ ಒಲವು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಹಾಗೂ ಎಲ್ಜೆಪಿ(ಆರ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಕೂಡ ಭಕ್ತಿಯಾರ್ಪುರವನ್ನು ‘ನಿತೀಶ್ಪುರ’ ಎಂದು ಮರುನಾಮಕರಣ ಮಾಡುವ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದ್ದಾರೆ.
“ಬಿಹಾರ ರಾಜಕಾರಣಕ್ಕೆ ನಿತೀಶ್ ಜೀ ಅವರ ಕೊಡುಗೆ ಅಪಾರ ಹಾಗೂ ಬೆಲೆಕಟ್ಟಲಾಗದ್ದು. ಅವರ ಜನ್ಮಸ್ಥಳ ಭಕ್ತಿಯಾರ್ಪುರವನ್ನು ನಿತೀಶ್ಪುರ ಎಂದು ಮರುನಾಮಕರಣ ಮಾಡುವ ಸಲಹೆಯನ್ನು ನಾನು ಬಲವಾಗಿ ಬೆಂಬಲಿಸುತ್ತೇನೆ” ಎಂದು ಚಿರಾಗ್ ಹೇಳಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಪ್ರತಿಮೆ ಸ್ಥಾಪನೆಗೆ ಆಗ್ರಹ:
ಇದೇ ವೇಳೆ, ಆರು ಮಂದಿ ಪ್ರಧಾನಿಗಳ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದ ತಮ್ಮ ತಂದೆ, ಮಾಜಿ ಕೇಂದ್ರ ಸಚಿವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪ್ರತಿಮೆಯನ್ನು ಪಾಟ್ನಾದ ಜೆಪಿ ಗಂಗಾ ಪಥದಲ್ಲಿ ಸ್ಥಾಪಿಸಬೇಕೆಂದು ಚಿರಾಗ್ ಪಾಸ್ವಾನ್ ಒತ್ತಾಯಿಸಿದ್ದಾರೆ.
“ಬಿಹಾರದಲ್ಲಿ ಲಾಲು ಪ್ರಸಾದ್, ರಾಮ್ ವಿಲಾಸ್ ಪಾಸ್ವಾನ್ ಮತ್ತು ನಿತೀಶ್ ಕುಮಾರ್ ಅವರ ಕೊಡುಗೆ ಅಪಾರ. ಅವರ ಹೆಸರುಗಳನ್ನು ಮುಂದಿನ ಪೀಳಿಗೆಗಳು ನೆನಪಿಸಿಕೊಳ್ಳುತ್ತವೆ. ಆದ್ದರಿಂದ ಅವರ ಹೆಸರನ್ನು ಸ್ಥಳಗಳಿಗೆ ಇಡುವುದರಲ್ಲಿ ಅಥವಾ ಅವರ ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಹಾಜಿಪುರ ಲೋಕಸಭಾ ಸಂಸದ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.






