ಅಣ್ಣಾ ವಿವಿಯಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣ; ಅಪರಾಧಿಗೆ ಕನಿಷ್ಠ 30 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ!

ತಮಿಳುನಾಡಿ ಚೆನ್ನೈನಲ್ಲಿರುವ ಅಣ್ಣಾ ವಿಶ್ವವಿದ್ಯಾಲಯ | PTI File Photo
ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿರಿಯಾನಿ ಮಾರಾಟಗಾರ ಜ್ಞಾನಶೇಖರನ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಳೆದ ಡಿಸೆಂಬರ್ ನಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆತನಿಗೆ 90,000 ರೂ. ದಂಡ ವಿಧಿಸಲಾಗಿದೆ ಎಂದು ಚೆನ್ನೈನ ಮಹಿಳಾ ನ್ಯಾಯಾಲಯ ತಿಳಿಸಿದೆ.
ಅಪರಾಧಿಯು ಕನಿಷ್ಠ 30 ವರ್ಷಗಳ ಕಾಲ ಜೈಲಿನಲ್ಲಿರಬೇಕಾಗುತ್ತದೆ ಎಂದು ನ್ಯಾಯಾಧೀಶೆ ಎಂ. ರಾಜಲಕ್ಷ್ಮಿ ಹೇಳಿದರು. ಆತನಿಗೆ ಯಾವುದೇ ಕರುಣೆ ತೋರಿಸಬಾರದು ಎಂದು ಅವರು ಪ್ರತಿಪಾದಿಸಿದರು.
ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಬೆದರಿಕೆ ಮತ್ತು ಅಪಹರಣ ಸೇರಿದಂತೆ ಎಲ್ಲಾ 11 ಆರೋಪಗಳಲ್ಲಿ ಜ್ಞಾನಶೇಖರನ್ ತಪ್ಪಿತಸ್ಥನೆಂದು ನ್ಯಾಯಾಧೀಶರು ಕಳೆದ ವಾರ ಘೋಷಿಸಿದ್ದರು. ಪ್ರಕರಣದಲ್ಲಿ ಕನಿಷ್ಠ 29 ಮಂದಿ ಸಾಕ್ಷ್ಯ ನುಡಿದಿದ್ದರು. ಪೊಲೀಸರು 100 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದರು.
ತನ್ನ ವೃದ್ಧ ತಾಯಿ ಮತ್ತು ಎಂಟು ವರ್ಷದ ಮಗಳನ್ನು ನೋಡಿಕೊಳ್ಳಬೇಕಾಗಿರುವುದರಿಂದ ಕನಿಷ್ಠ ಶಿಕ್ಷೆಗಾಗಿ ಜ್ಞಾನಶೇಖರನ್ ಈ ಹಿಂದೆ ಮನವಿ ಮಾಡಿದ್ದನು. ಆದರೆ ಎಲ್ಲಾ ಆರೋಪಗಳು ಸಾಬೀತಾಗಿರುವುದರಿಂದ ಗರಿಷ್ಠೆ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದರು.
2024ರ ಡಿಸೆಂಬರ್ 23 ರಂದು, ಜ್ಞಾನಶೇಖರನ್ ವಿಶ್ವವಿದ್ಯಾಲಯದ ಆವರಣಕ್ಕೆ ಪ್ರವೇಶಿಸಿ ಸಂತ್ರಸ್ತೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಕೆಯನ್ನು ಬ್ಲ್ಯಾಕ್ಮೇಲ್ ಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಚಿತ್ರೀಕರಿಸಿದ್ದ. ಅದೇ ದಿನ ಆತನನ್ನು ಬಂಧಿಸಲಾಗಿತ್ತು.







