ಕಾಂಗ್ರೆಸ್ ಪಕ್ಷದಂತೆ ಡಿಎಂಕೆ ಇತಿಹಾಸ ದೊಡ್ಡದಿದೆ: ಡಿ.ಕೆ.ಶಿವಕುಮಾರ್

ತಮಿಳುನಾಡು: ಕಾಂಗ್ರೆಸ್ ಪಕ್ಷ ದೊಡ್ಡ ಇತಿಹಾಸ ಹೊಂದಿರುವಂತೆ ತಮಿಳುನಾಡಿನಲ್ಲಿ ದ್ರಾವಿಡ ಮುನ್ನೆಟ್ರ ಕಳಗಂ (ಡಿಎಂಕೆ) ಪಕ್ಷವೂ ದೊಡ್ಡ ಇತಿಹಾಸ ಹೊಂದಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ತಮಿಳುನಾಡಿನ ಪೊನ್ನೇರಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಒಂದು ವಾರದಲ್ಲಿ ತಮಿಳುನಾಡಿನ ವಿಧಾನಸಭೆ ಚುನಾವಣೆ ಮುಕ್ತಾಯಗೊಳ್ಳಲಿದೆ. ಇಡೀ ದೇಶ ನಿಮ್ಮ ತೀರ್ಪಿಗಾಗಿ ಎದುರುನೋಡುತ್ತಿದೆ ಎಂದು ಹೇಳಬಯಸುತ್ತೇನೆ. ನಾನು ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿದ್ದು, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ಅಧಿಕಾರಕ್ಕೆ ಬಂದಾಗೆಲ್ಲ ಸಮಾಜದ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ ಎಂದರು.
ಡಿಎಂಕೆ ತಮಿಳುನಾಡಿನ ಸಂಸ್ಕೃತಿ, ಭಾವನೆ ಕಾಪಾಡಿಕೊಂಡು ಬಂದಿದೆ. ಕಾಂಗ್ರೆಸ್ ಹಾಗೂ ಡಿಎಂಕೆ ನಡುವೆ 40 ವರ್ಷಗಳ ಐತಿಹಾಸಿಕ ಮೈತ್ರಿ ಹೊಂದಿದ್ದು, ಈ ಮೈತ್ರಿ ದೇಶ ಹಾಗೂ ತಮಿಳುನಾಡನ್ನು ಮುನ್ನಡೆಸಿಕೊಂಡು ಹೋಗುತ್ತಿದೆ. ಬ್ರಿಟಿಷರು ನೂರಾರು ವರ್ಷಗಳ ಕಾಲ ಈ ದೇಶವನ್ನು ಆಳಿದರು. ನಾವು ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ವೇಳೆ ಮಾತೃಭಾಷೆ ಯಾವುದು ಎಂದು ನಮೂದಿಸುತ್ತೇವೆ. ನಾನು ಕರ್ನಾಟಕದವನಾಗಿದ್ದು ನನ್ನ ಮಾತೃಭಾಷೆ ಕನ್ನಡ, ಇದು ತಮಿಳುನಾಡು ನಿಮ್ಮ ಮಾತೃಭಾಷೆ ತಮಿಳು, ಕೇರಳಿಗರ ಮಾತೃಭಾಷೆ ಮಲಯಾಳಂ, ಆಂಧ್ರದವರದ್ದು ತೆಲುಗು, ಮಹಾರಾಷ್ಟ್ರದವರದ್ದು ಮರಾಠಿ. ಬ್ರಿಟಿಷರ ಕಾಲದಿಂದಲೂ ಮಾತೃಭಾಷೆಗೆ ಗೌರವ ನೀಡುತ್ತಾ ಬಂದಿದ್ದೇವೆ ಎಂದು ಅವರು ತಿಳಿಸಿದರು.
ಬಿಜೆಪಿ ಹಾಗೂ ಎನ್‍ಡಿಎ ಸರಕಾರ ನೀವು ನಿಮ್ಮ ಮಾತೃಭಾಷೆ ಮರೆತು ಹಿಂದಿ ಭಾಷೆ ಕಲಿಯಬೇಕು ಎಂದು ಒತ್ತಡ ಹೇರುತ್ತಿದೆ. ನಮ್ಮ ಮಾತೃಭಾಷೆಗೆ ಆಗುವ ಅಗೌರವವನ್ನು ನಾವು ಸಹಿಸುವುದಿಲ್ಲ. ಹೀಗಾಗಿ ಸ್ಟಾಲಿನ್ ಹಾಗೂ ದಕ್ಷಿಣ ಭಾರತದ ರಾಜ್ಯಗಳ ನಾಯಕರೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಹತ್ತು ದಿನಗಳಿಂದ ತಮಿಳುನಾಡಿನಲ್ಲಿ ನಾನು ಚುನಾವಣಾ ಪ್ರಚಾರ ಮಾಡುತ್ತಿದ್ದು, ನಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇನೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಮೈತ್ರಿ ಪಕ್ಷಗಳ ಸರಕಾರ ಜನಸಾಮಾನ್ಯರ ಹಕ್ಕು, ತಮಿಳುನಾಡಿನ ಹಿತವನ್ನು ರಕ್ಷಣೆ ಮಾಡಿಕೊಂಡು ಬಂದಿದೆ ಎಂದು ಅವರು ಹೇಳಿದರು.
ದೊಡ್ಡ ಗೆಲುವು ಸಿಕ್ಕಿದೆ: ನಿನ್ನೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡನೆ ಮಾಡಿತ್ತು. ಮಹಿಳಾ ಮೀಸಲಾತಿಗೆ ನಾವೆಲ್ಲರೂ ಬೆಂಬಲ ನೀಡುತ್ತೇವೆ. ಆದರೆ, ಕ್ಷೇತ್ರ ಪುನರ್ ವಿಂಗಡಣೆ ಹೆಸರಿನಲ್ಲಿ ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳ ಕ್ಷೇತ್ರಗಳನ್ನು ಕಡಿಮೆ ಮಾಡುವ ಷಡ್ಯಂತ್ರವನ್ನು ನಾವು ವಿರೋಧಿಸುತ್ತೇವೆ. ಕೇಂದ್ರದ ಈ ನೀತಿ ವಿರುದ್ಧ ಸ್ಟಾಲಿನ್ ಧ್ವನಿ ಎತ್ತಿದ್ದು, ಇಡಿಯಾ ಮೈತ್ರಿಕೂಟದ ಎಲ್ಲ ನಾಯಕರು ಸೇರಿ ಈ ಮಸೂದೆಯನ್ನು ಮಣಿಸಿದ್ದೇವೆ. ಇದು ಪ್ರಜಾಪ್ರಭುತ್ವದ ಗೆಲುವಾಗಿದ್ದು, ಇದಕ್ಕಾಗಿ ಹೋರಾಟ ಮಾಡಿದ ತಮಿಳುನಾಡಿನ ಸಂಸದರಿಗೆ ನಾನು ಅಭಿನಂದಿಸುತ್ತೇನೆ ಎಂದು ಅವರು ನುಡಿದರು.
ಈ ದೇಶದ ಭವಿಷ್ಯ ಇಂಡಿಯಾ ಮೈತ್ರಿಕೂಟದ ಜತೆಗಿದೆ. ತಮಿಳುನಾಡಿನ ಭವಿಷ್ಯ ನಿಮ್ಮ ಕೈಯಲ್ಲಿದೆ. ಸ್ಟಾಲಿನ್ ನಾಯಕತ್ವದಲ್ಲಿ ತಮಿಳುನಾಡಿನ ಜನರ ಹಿತವನ್ನು ಕಾಪಾಡಲಾಗುವುದು. ಎನ್‍ಡಿಎ ಹಾಗೂ ಎಐಎಡಿಎಂಕೆ ದುರಾಡಳಿತದಿಂದ ತಮಿಳುನಾಡನ್ನು ರಕ್ಷಣೆ ಮಾಡಿ ಈ ರಾಜ್ಯವನ್ನು ಸಮೃದ್ಧವಾಗಿ ಮುನ್ನಡೆಸಲಾಗುತ್ತಿದೆ. ತಮಿಳುನಾಡು ಈಗ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ನೀವೆಲ್ಲರೂ ಸ್ಟಾಲಿನ್‍ರನ್ನು ಮತ್ತೆ ಈ ರಾಜ್ಯದ ಸಿಎಂ ಆಗಿ ಮರು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.
ಜನರನ್ನು ರಕ್ಷಿಸಲು ಗ್ಯಾರಂಟಿ: ಕರ್ನಾಟಕದಲ್ಲಿ ನಾವು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ಅಧಿಕಾರಕ್ಕೆ ಬಂದ ನಂತರ ಎಲ್ಲ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಬಡ ಮಹಿಳೆಯರಿಗೆ ಮಾಸಿಕ 2ಸಾವಿರ ರೂ., ಉಚಿತ ಬಸ್ ಪ್ರಯಾಣ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, 10ಕೆ.ಜಿ ಅಕ್ಕಿ, ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ.
ಬಿಜೆಪಿ ಟೀಕಿಸಿದ್ದ ನಮ್ಮ ಗ್ಯಾರಂಟಿಗಳು ದೇಶಕ್ಕೆ ಮಾದರಿಯಾಗಿವೆ. ನಾವು ಕೊಟ ಮಾತಿನಂತೆ ನಡೆದು ನಮ್ಮ ಭರವಸೆಗಳಿಗೆ ಬದ್ಧವಾಗಿದ್ದೇವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಸ್ಟಾಲಿನ್ ಸೇರಿ ಮನೆ ಯಜಮಾನಿಗೆ 2 ಸಾವಿರ ರೂ.ಆರ್ಥಿಕ ನೆರವು ನೀಡಲಾಗುವುದು. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ಅಗತ್ಯವಸ್ತುಗಳ ಖರೀದಿಗೆ 8 ಸಾವಿರ ರೂ.ಮೊತ್ತದ ಕೂಪನ್ ವಿತರಣೆ ಮಾಡಲಾಗುವುದು.
ತಮಿಳುನಾಡಿನ ಬೆನ್ನೆಲುಬು ಕೃಷಿ. ರೈತರಿಗೆ ಮೀಟರ್ ರಹಿತ ಪಂಪ್‍ಸೆಟ್ ನೀಡಲಾಗುವುದು. ಇದರೊಂದಿಗೆ ರೈತರಿಗೆ ನೀರು ಹಾಗೂ ವಿದ್ಯುತ್ ನೀಡಲಾಗುವುದು. ವಿಕಲಚೇತನರು, ಹಿರಿಯ ನಾಯಕರಿಗೆ 2 ಸಾವಿರ ರೂ.ಪಿಂಚಣಿ ಹೆಚ್ಚಳ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ವಸತಿರಹಿತರಿಗೆ 10 ಲಕ್ಷ ಮನೆಗಳನ್ನು ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ತಮಿಳುನಾಡಿನ ಇತಿಹಾಸದಲ್ಲೇ 10ಲಕ್ಷ ಮನೆ ನೀಡುವ ಸಂಕಲ್ಪ ಬೇರೆ ಯಾವುದೇ ಸರಕಾರ ಮಾಡಿಲ್ಲ ಎಂದರು.






