ದಿಲ್ಲಿ ಮದ್ಯ ನೀತಿ ಪ್ರಕರಣ: ಕೇಜ್ರಿವಾಲ್, ಸಿಸೋಡಿಯಾಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ ದಿಲ್ಲಿ ಹೈಕೋರ್ಟ್

Photo| indianexpress
ಹೊಸ ದಿಲ್ಲಿ: ಕಳೆದ ವಾರ ನ್ಯಾ.ಸ್ವರಣ ಕಾಂತ ಶರ್ಮ ಪ್ರಾರಂಭಿಸಿದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯ ಪೀಠ ಮಂಗಳವಾರ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಇನ್ನೂ ಆರು ಮಂದಿ ಆಪ್ ನಾಯಕರಿಗೆ ನೋಟಿಸ್ ಜಾರಿಗೊಳಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ನಿಂದನಾತ್ಮಕ ವಿಷಯಗಳನ್ನು ಪ್ರಸಾರ ಮಾಡಲಾಗಿದ್ದು, ಆ ಮೂಲಕ ತನಗೆ ಹಾಗೂ ನ್ಯಾಯಾಂಗಕ್ಕೆ ನಿಂದನೆ ಮಾಡಲಾಗಿದೆ ಆರೋಪಿಸಿರುವ ನ್ಯಾ. ಸ್ವರಣ ಕಾಂತ ಶರ್ಮ, ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಶಾಸಕರಾದ ದುರ್ಗೇಶ್ ಪಾಠಕ್, ವಿನಯ್ ಮಿಶ್ರಾ, ದಿಲ್ಲಿ ಆಪ್ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹಾಗೂ ಸಾಮಾಜಿಕ ಮಾಧ್ಯಮ ಅಭಿಯಾನದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿರುವ ದೇವೇಶ್ ವಿಶ್ವಕರ್ಮ ವಿರುದ್ಧ 68 ಪುಟಗಳ ಆದೇಶ ಹೊರಡಿಸಿದ್ದರು.
ಈ ಏಳು ಮಂದಿ ಆಪ್ ನಾಯಕರಿಗೆ ಮಂಗಳವಾರ ನೋಟಿಸ್ ಜಾರಿಗೊಳಿಸಿದ ನ್ಯಾ. ನವೀನ್ ಚಾವ್ಲಾ ಮತ್ತು ನ್ಯಾ.ರವೀಂದ್ರ ದುಡೇಜಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ, ನಿಂದನಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಹಾಗೂ ಇನ್ನಿತರ ಇಲೆಕ್ಟ್ರಾನಿಕ್ ತುಣುಕುಗಳನ್ನು ನ್ಯಾಯಾಲಯದ ದಾಖಲೆಗಾಗಿ ಸಂರಕ್ಷಿಸಿಡುವಂತೆ ರಿಜಿಸ್ಟ್ರಿಗೆ ಸೂಚಿಸಿತು.
ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ಅಮಿಕಸ್ ಕ್ಯೂರಿಯನ್ನು ನೇಮಿಸುವುದಾಗಿಯೂ ನ್ಯಾಯಾಲಯ ಪ್ರಕಟಿಸಿದೆ.




