Uttar Pradesh | 130 ಕ್ಷೇತ್ರಗಳಿಗೆ ಕಾಂಗ್ರೆಸ್ ಬೇಡಿಕೆ; ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದ ಸಮಾಜವಾದಿ ಪಾರ್ಟಿ!
ಸ್ಥಾನ ಹಂಚಿಕೆ ಮಾತುಕತೆಯ ಮೊದಲ ಸುತ್ತು ಕೇವಲ 15 ನಿಮಿಷಗಳಲ್ಲಿ ಮುಕ್ತಾಯ

Photo Credit : PTI
ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಥಾನ ಹಂಚಿಕೆ ಕುರಿತು ಸಮಾಜವಾದಿ ಪಕ್ಷ (SP) ಮತ್ತು ಕಾಂಗ್ರೆಸ್ ನಡುವೆ ಸೋಮವಾರ ಮೊದಲ ಸುತ್ತಿನ ಮಾತುಕತೆ ನಡೆಯಿತು. ಕಾಂಗ್ರೆಸ್ ಸ್ಪರ್ಧಿಸಲು ಬಯಸಿರುವ ಸುಮಾರು 130 ಕ್ಷೇತ್ರಗಳ ಪಟ್ಟಿಯನ್ನು SP ನಾಯಕರಿಗೆ ಸಲ್ಲಿಸಿತು. ಆದರೆ, ಸ್ಥಾನ ಹಂಚಿಕೆ ವಿಚಾರದಲ್ಲಿ ಅಪಾಯ ಮೈಮೇಲೆ ಎಳೆದುಕೊಳ್ಳಲು ಸಿದ್ಧರಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.
►15 ನಿಮಿಷದಲ್ಲೇ ಮುಕ್ತಾಯಗೊಂಡ ಸಭೆ!
ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರ ದಿಲ್ಲಿ ನಿವಾಸದಲ್ಲಿ ಇಂದು ಬೆಳಗ್ಗೆ ಸ್ಥಾನ ಹಂಚಿಕೆ ಕುರಿತು ಮೊದಲ ಸುತ್ತಿನ ಔಪಚಾರಿಕ ಮಾತುಕತೆ ನಿಗದಿಯಾಗಿತ್ತು. ಸುಮಾರು 11.50ಕ್ಕೆ ಸಮಾಜವಾದಿ ಪಕ್ಷದ ನಾಯಕರು ನಿವಾಸಕ್ಕೆ ಆಗಮಿಸಿದರು. ಅದಾಗಲೇ ಕಾಂಗ್ರೆಸ್ ನ ಸಂಧಾನಕಾರರು ಅಲ್ಲಿ ಉಪಸ್ಥಿತರಿದ್ದರು ಎಂದು ಹೇಳಲಾಗಿದೆ.
ಸಭೆಯಲ್ಲಿ ಸಮಾಜವಾದಿ ಪಕ್ಷದ ನಿಯೋಗ ಆಸೀನವಾಗುತ್ತಿದ್ದಂತೆಯೇ, "ನೀವು ಏನನ್ನು ನಿರ್ಧರಿಸಿದ್ದೀರಿ?" ಎಂದು SP ಸಂಸದ ರಾಮ್ ಗೋಪಾಲ್ ಯಾದವ್ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ತಾವು ಸ್ಪರ್ಧಿಸಲು ಬಯಸಿರುವ ಸುಮಾರು 130 ಕ್ಷೇತ್ರಗಳ ಪಟ್ಟಿಯನ್ನು ಮೇಜಿನ ಮೇಲಿಟ್ಟರು.
ಆದರೆ, ಹೆಚ್ಚಿನ ಬೇಡಿಕೆಗಳನ್ನು ಹೊಂದಿದ್ದ ಪಟ್ಟಿಯನ್ನು ಕಂಡ ಸಮಾಜವಾದಿ ಪಕ್ಷದ ನಾಯಕರು ತಕ್ಷಣ ಯಾವುದೇ ಭರವಸೆ ನೀಡಲಿಲ್ಲ ಎನ್ನಲಾಗಿದೆ. ಪಟ್ಟಿಯ ಕುರಿತು ಅಖಿಲೇಶ್ ಯಾದವ್ ಅವರೊಂದಿಗೆ ಚರ್ಚಿಸಿದ ಬಳಿಕ ನಾಳೆ ಮರಳುವುದಾಗಿ ತಿಳಿಸಿದರು. ಕಾಂಗ್ರೆಸ್ ತನ್ನ ಪಟ್ಟಿಯನ್ನು ಹಸ್ತಾಂತರಿಸಿದ ಬಳಿಕ ಸಭೆಯಲ್ಲಿ ಚಹಾ ವಿತರಿಸಲಾಯಿತು. ಈ ಮಾತುಕತೆ ಕೇವಲ 15 ನಿಮಿಷಗಳಲ್ಲಿ ಮುಕ್ತಾಯಗೊಂಡಿತು ಎಂದು ವರದಿಯಾಗಿದೆ.
ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಭದ್ರಕೋಟೆಗಳಾದ ಅಮೇಥಿ ಮತ್ತು ರಾಯ್ ಬರೇಲಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಬೇಡಿಕೆ ಇರಿಸಿದೆ ಎನ್ನಲಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಭದ್ರಕೋಟೆಗಳಾದ ಇಟಾವಾ ಮತ್ತು ಮೈನ್ಪುರಿ ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಜಿಲ್ಲೆಗಳಲ್ಲಿ ತಲಾ ಒಂದು ಕ್ಷೇತ್ರಕ್ಕೆ ಕಾಂಗ್ರೆಸ್ ಬೇಡಿಕೆ ಸಲ್ಲಿಸಿದೆ ಎಂದು ಹೇಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ SP ಸಂಸದ ರಾಮ್ ಗೋಪಾಲ್ ಯಾದವ್, "ಸಭೆ ತುಂಬಾ ಸೌಹಾರ್ದಯುತವಾಗಿತ್ತು. ನಾವು ಪರಸ್ಪರರ ದೃಷ್ಟಿಕೋನಗಳನ್ನು ಆಲಿಸಿದೆವು. ಆದಷ್ಟು ಶೀಘ್ರವಾಗಿ ಮೈತ್ರಿಯನ್ನು ಅಂತಿಮಗೊಳಿಸಿ ನಿಮಗೆ ಮಾಹಿತಿ ನೀಡುತ್ತೇವೆ. ಈ ಪ್ರಕ್ರಿಯೆಯನ್ನು ಮುಂದಿನ ಎರಡು-ಮೂರು ದಿನಗಳಲ್ಲಿ ಮುಗಿಸುತ್ತೇವೆ. ನಾಳೆ ಮುಂದಿನ ಸಭೆ ನಡೆಯಲಿದೆ" ಎಂದು ತಿಳಿಸಿದರು.
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತೀಚೆಗೆ AIMIM ಮುಖ್ಯಸ್ಥ ಅಸದುದ್ದೀನ್ ಉವೈಸಿ ಮತ್ತು ಆಝಾದ್ ಸಮಾಜ್ ಪಾರ್ಟಿ (ಕಾನ್ಶಿರಾಂ) ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಮೈತ್ರಿ ಮಾಡಿಕೊಂಡಿದ್ದು, 'ಸಾಮಾಜಿಕ ಪರಿವರ್ತನ್ ಮೋರ್ಚಾ' ಎಂಬ ಮೈತ್ರಿಕೂಟ ರಚಿಸಿಕೊಂಡಿದ್ದಾರೆ. ಈ ಮೈತ್ರಿಕೂಟ ಉತ್ತರ ಪ್ರದೇಶದ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.






