ಪ್ರಧಾನಿ ಮೋದಿ ಎದುರಾದಾಗ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಹಿಂಜರಿಯುತ್ತಾರೆ: ಆತ್ಮಚರಿತ್ರೆಯಲ್ಲಿ ಸೋನಿಯಾಗಾಂಧಿ ಉಲ್ಲೇಖ

Photo credit : X,PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ತಮ್ಮ 544 ಪುಟಗಳ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'ನಲ್ಲಿ ಮಹತ್ವದ ವಿಚಾರಗಳನ್ನು ಮೆಲುಕು ಹಾಕಿದ್ದಾರೆ.
ಮೋದಿ ಅವರೊಂದಿಗೆ ನೇರವಾದ ಒಡನಾಟ ಬಹಳ ಕಡಿಮೆ. ಅಧಿಕೃತ ಸಭೆಗಳಲ್ಲಿ ಮಾತ್ರ ಭೇಟಿಯಾಗುತ್ತೇವೆ. ಎದುರು ಬಂದಾಗ ಒಬ್ಬರನ್ನೊಬ್ಬರು ಔಪಚಾರಿಕವಾಗಿ 'ನಮಸ್ಕಾರ'ದೊಂದಿಗೆ ಸ್ವಾಗತಿಸುತ್ತೇವೆ. ಅವರು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದನ್ನು ತಪ್ಪಿಸಿ, ಬೇರೆಡೆಗೆ ದೃಷ್ಟಿ ಹಾಯಿಸುತ್ತಾರೆ ಎಂದು ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ಸಣ್ಣ-ಪುಟ್ಟ ಮಾತುಕತೆ ಹೊರತುಪಡಿಸಿ, ನಾವು ಎಂದಿಗೂ ಸಂಭಾಷಣೆ ನಡೆಸಿಲ್ಲ. ಆದರೂ ಹುಟ್ಟುಹಬ್ಬ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಔಪಚಾರಿಕವಾಗಿ ವಿನಿಮಯ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದಾಗ, ಮೋದಿ ಅವರು 'ನೀವು ಚೆನ್ನಾಗಿದ್ದೀರಾ' ಎಂದು ಕೇಳಿದ್ದರು. ಅದಕ್ಕೆ 'ಹೌದು, ಧನ್ಯವಾದಗಳು, ನಾನು ಈಗ ಚೆನ್ನಾಗಿದ್ದೇನೆ' ಎಂದು ಉತ್ತರಿಸಿದ್ದೆ ಎಂದು ಪುಸ್ತಕದಲ್ಲಿ ತಿಳಿಸಿದ್ದಾರೆ.
ಜವಾಹರಲಾಲ್ ನೆಹರು ಅವರ ಕುರಿತು ಪ್ರಧಾನಿ ಮೋದಿ ಮಾಡಿರುವ ಕಟು ಟೀಕೆಗಳಿಗೆ, ಆರ್ಎಸ್ಎಸ್ನ ಪ್ರಭಾವವೇ ಕಾರಣ ಎಂದು ಆರೋಪಿಸಿದ್ದಾರೆ. ಅವರ ಸಿದ್ಧಾಂತಗಳು ಹಾಗೂ ವಿಶ್ವ ದೃಷ್ಟಿಕೋನಗಳು ವಿಭಿನ್ನವಾಗಿವೆ. ತಮ್ಮ ಕನಸಿನ ಭಾರತಕ್ಕಾಗಿ ಹೋರಾಡುತ್ತಿದ್ದು, ನಾನು ನನ್ನ ಕಲ್ಪನೆಗೆ ಹೋರಾಡುತ್ತಿದ್ದೇನೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಈ ಆತ್ಮಚರಿತ್ರೆಯು ಇಟಲಿಯಲ್ಲಿನ ಸೋನಿಯಾ ಗಾಂಧಿ ಅವರ ಆರಂಭಿಕ ಜೀವನ, ಯುಕೆಯಲ್ಲಿ ಕಳೆದ ಸಮಯ, ಕೇಂಬ್ರಿಡ್ಜ್ನಲ್ಲಿ ರಾಜೀವ್ ಗಾಂಧಿ ಭೇಟಿ ಮತ್ತು 1968ರಲ್ಲಿ ವಿವಾಹವಾದ ವಿಚಾರಗಳನ್ನು ಒಳಗೊಂಡಿದೆ.
ಭಾರತಕ್ಕೆ ಆಗಮಿಸುವ ನಿರ್ಧಾರ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗಿನ ಸಂಬಂಧದ ಕುರಿತಾಗಿಯೂ ವಿವರಿಸಲಾಗಿದೆ. 1984ರಲ್ಲಿ ಇಂದಿರಾ ಗಾಂಧಿ ಮತ್ತು 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ವಿರುದ್ದದ ಹೋರಾಟದ ವಿಷಯಗಳನ್ನು ಈ ಆತ್ಮಚರಿತ್ರೆಯು ಒಳಗೊಂಡಿದೆ.






