ನಮ್ಮನ್ನು ನೈಜ TMC ಎಂದು ಪರಿಗಣಿಸಿ: ಬಂಡಾಯ ಸಂಸದರ ಬಣದಿಂದ ಸ್ಪೀಕರ್ಗೆ ಮನವಿ

ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒಳಗಿನ ಬಂಡಾಯವು ಶುಕ್ರವಾರ ಮತ್ತಷ್ಟು ತೀವ್ರಗೊಂಡಿದ್ದು, ತಾನು ಮುಂದಿನ ವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ತನ್ನನ್ನು ನೈಜ ಟಿಎಂಸಿ ಸಂಸದೀಯ ಗುಂಪು ಎಂಬುದಾಗಿ ಮಾನ್ಯಮಾಡುವಂತೆ ಕೋರುವುದಾಗಿ ಪಕ್ಷದ ಅತೃಪ್ತ ಸಂಸದರ ಬಣ ತಿಳಿಸಿದೆ. 19 ಲೋಕಸಭಾ ಸದಸ್ಯರ ಬೆಂಬಲ ತನಗಿದೆ ಎಂದು ಅದು ಹೇಳಿಕೊಳ್ಳುತ್ತಿದೆ.
ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಈ ನಡೆಯನ್ನು ತಿರಸ್ಕರಿಸಿದ್ದು, ಭಾರತದ ಪಕ್ಷಾಂತರ ನಿಷೇಧ ಕಾಯ್ದೆಯಡಿ ಇಂತಹ ಹಕ್ಕನ್ನು ಮಂಡಿಸಲು ಅವಕಾಶವಿಲ್ಲ ಎಂದು ಹೇಳಿದೆ.
ತನ್ನನ್ನು ನೈಜ ತೃಣಮೂಲ ಕಾಂಗ್ರೆಸ್ ಎಂಬುದಾಗಿ ಪರಿಗಣಿಸುವಂತೆ ಕೋರಿ ಅತೃಪ್ತ ಬಣವು ಈಗಾಗಲೇ ಸ್ಪೀಕರ್ಗೆ ಮನವಿ ಸಲ್ಲಿಸಿದೆ ಎಂದು ಬಂಡಾಯ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಹೇಳಿದರು. ಸೋಮವಾರ ಈ ವಿಷಯದಲ್ಲಿ ಸ್ಪೀಕರ್ರನ್ನು ಔಪಚಾರಿಕವಾಗಿ ಭೇಟಿಯಾಗಿ ಹಕ್ಕು ಮಂಡಿಸಲಾಗುವುದು ಎಂದು ಅವರು ಹೇಳಿದರು.
ಜೂನ್ 8 ರಿಂದ ಸಹಿ ಸಂಗ್ರಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದುವರೆಗೆ 19 ಸಂಸದರು ಈ ಮನವಿಗೆ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು.
ಈ ಘೋಷಣೆಗೆ ಟಿಎಂಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಬಂಡುಕೋರರ ಈ ನಡೆ ಕಾನೂನಿಗೆ ಅನುಗುಣವಾಗಿಲ್ಲ ಎಂದು ಹೇಳಿದೆ.






