ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಪ್ರೇಮ ಪ್ರಕರಣಗಳೇ ಕಾರಣ: ರಾಜಸ್ಥಾನ ಸಚಿವ ಶಾಂತಿ ಧಾರಿವಾಲ್
ಸಾಕ್ಷ್ಯ ನೀಡಿ ಎಂದ ಮೃತ ಬಾಲಕಿಯ ತಂದೆ ರವೀಂದ್ರ ಸಿನ್ಹಾ

ರಾಜಸ್ಥಾನದ ಸಚಿವ ಶಾಂತಿ ಧಾರಿವಾಲ್, Photo: ANi
ಕೋಟಾ: ಇತ್ತೀಚೆಗೆ ತಾನಿರುವ ಹಾಸ್ಟೆಲ್ ನಲ್ಲಿ ಸಾವನ್ನಪ್ಪಿದ 16 ವರ್ಷದ ಬಾಲಕಿ ಸೇರಿದಂತೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಪ್ರೇಮ ಪ್ರಕರಣಗಳು ಕಾರಣ ಎಂದು ರಾಜಸ್ಥಾನದ ಸಚಿವ ಶಾಂತಿ ಧಾರಿವಾಲ್ ಹೇಳಿದ್ದಾರೆ, ಇದಕ್ಕೆ ಸಾಕ್ಷ್ಯ ಇದ್ದರೆ ಅದನ್ನು ನನಗೆ ನೀಡಿ ಎಂದು ಮೃತ ಬಾಲಕಿಯ ತಂದೆ ರವೀಂದ್ರ ಸಿನ್ಹಾ ಒತ್ತಾಯಿಸಿದ್ದಾರೆ.
ಪ್ರೇಮ ಪ್ರಕರಣವೇ ಕಾರಣ ಎಂದು ಬಾಲಕಿ ಬಿಟ್ಟುಹೋದ ಪತ್ರದಲ್ಲಿದೆ ಎಂದು ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಹೇಳಿಕೊಂಡರು.
ಆದಾಗ್ಯೂ, ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡ ಬಾಲಕಿಯ ಕೊಠಡಿಯಿಂದ ಯಾವುದೇ ಪತ್ರ ಅಥವಾ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
‘’ಇವತ್ತು ಒಬ್ಬ ಹುಡುಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲು ಬೇಸರವಾಗುತ್ತದೆ. ಅಕ್ರಮ ಸಂಬಂಧದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿ ಪತ್ರವನ್ನು ಬರೆದಿದ್ದಾಳೆ ... ಇಲ್ಲಿ ಕೋಚಿಂಗ್ ವಿದ್ಯಾರ್ಥಿಗಳು ಮಾಡಿದ ಎಲ್ಲಾ ಆತ್ಮಹತ್ಯೆಗಳಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿದೆ ”ಎಂದು ಧಾರಿವಾಲ್ ಸುದ್ದಿಗಾರರಿಗೆ ತಿಳಿಸಿದರು.
ಆದಾಗ್ಯೂ, ಮೃತ NEET ಆಕಾಂಕ್ಷಿ ರಿಚಾ ಅವರ ಮೃತದೇಹವನ್ನು ಸ್ವೀಕರಿಸಲು ಗುರುವಾರ ಬೆಳಿಗ್ಗೆ ರಾಂಚಿಯಿಂದ ಕೋಟಾ ತಲುಪಿದ ರಿಚಾ ಅವರ ತಂದೆ, ಸಚಿವ ಧಾರಿವಾಲ್ ಅವರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಹಾಗೂ ಅವರ ಹೇಳಿಕೆಯನ್ನು ಸಾಬೀತುಪಡಿಸಲು ಸಾಕ್ಷ್ಯವನ್ನು ಕೋರಿದ್ದಾರೆ.
''ನನ್ನ ಮಗಳಿಗೆ ಯಾವುದೇ ಅಕ್ರಮ ಸಂಬಂಧ ಇರಲಿಲ್ಲ. ಅವರ ಬಳಿ (ಧಾರಿವಾಲ್) ಅಂತಹ ಯಾವುದೇ ಪುರಾವೆಗಳಿದ್ದರೆ, ಅದನ್ನು ಅವರು ನನ್ನೊಂದಿಗೆ ಹಂಚಿಕೊಳ್ಳಬೇಕು’’ ಎಂದು ಹುಡುಗಿಯ ತಂದೆ ರವೀಂದ್ರ ಸಿನ್ಹಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಕೋಟಾದ ಕೆಲವು ಹುಡುಗರು ಕೋಚಿಂಗ್ ಇನ್ಸ್ಟಿಟ್ಯೂಟ್ ಗೆ ಹೋಗುವಾಗ ಮತ್ತು ಬರುವಾಗ ಚುಡಾಯಿಸುತ್ತಾರೆ ಎಂದು ಮಗಳು ದೂರು ನೀಡಿದ್ದರು ಎಂದು ಸಿನ್ಹಾ ಹೇಳಿದರು.







