ಜಗತ್ತಿನಲ್ಲೇ ಗೃಹ ಬಳಕೆಯ ಎಲ್ಪಿಜಿ ದರ ಭಾರತದಲ್ಲಿ ಅತ್ಯಂತ ಕನಿಷ್ಠ: ಕೇಂದ್ರ ಸರಕಾರ

Photo credit: PTI
ಹೊಸದಿಲ್ಲಿ,ಜೂ.7: ಈಗಲೂ ಭಾರತೀಯ ಕುಟುಂಬಗಳು ಜಗತ್ತಿನಲ್ಲೇ ಅತ್ಯಂತ ಕಡಿಮೆ ದರದಲ್ಲಿ ಅಡುಗೆ ಅನಿಲವನ್ನು ಪಡೆದುಕೊಳ್ಳುತ್ತಿವೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಸಚಿವಾಲಯ ರವಿವಾರ ತಿಳಿಸಿದೆ. ಪಶ್ಚಿಮ ಏಶ್ಯಾ ಬಿಕ್ಕಟ್ಟಿನ ಬಳಿಕ ಇಂಧನದ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದ್ದು, ರವಿವಾರ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ 29 ರೂ. ಏರಿಕೆ ಮಾಡಲಾಗಿದೆ. ಗೃಹಬಳಕೆಯ ಎಲ್ಪಿಜಿ ದರ ಏರಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸರಕಾರವು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರದಲ್ಲಿ ತೀವ್ರ ಬೆಲೆ ಏರಿಕೆಯಾಗಿರುವುದರಿಂದ ಕುಟುಂಬಗಳು ಅಡುಗೆ ಅನಿಲ ಖರೀದಿಗೆ ಇನ್ನೂ ನೂರಾರು ರೂ. ಹೆಚ್ಚಿಗೆ ಹಣವನ್ನು ಪಾವತಿಸಬೇಕಿತ್ತಾದರೂ, ಅದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಬದಲು ಸರಕಾರವೇ ಹೊತ್ತುಕೊಂಡಿದೆ ಎಂದು ಹೇಳಿದೆ.
ಭಾರತದಲ್ಲಿ 14.2 ಕೆ.ಜಿ. ಸಿಲಿಂಡರ್ ದರ ( ಉಜ್ವಲರಾ ಯೋಜನೆ) 642 ರೂ.ಇದ್ದರೆ, ಪಾಕಿಸ್ತಾನದಲ್ಲಿ 1046 ರೂ., ನೇಪಾಳದಲ್ಲಿ 1207, ಬಾಂಗ್ಲಾದಲ್ಲಿ 1225, ಶ್ರೀಲಂಕಾದಲ್ಲಿ 1241 ಹಾಗೂ ಅಮೆರಿಕದಲ್ಲಿ 1755 ರೂ., ಆಸ್ಟ್ರೇಲಿಯದಲ್ಲಿ1765 ಹಾಗೂ ಕೆನಡದಲ್ಲಿ 2411 ರೂ. ಆಗಿದೆ ಎಂದು ಸಚಿವಾಲಯ ಸ್ಪಷ್ಟೀಕರಣ ನೀಡಿದೆ.






