ಸೈಬರ್ ಜಾಲ ಬೇಧಿಸಿದ ಪಂಜಾಬ್ ಪೊಲೀಸರು: 132 ಮಂದಿ ಆರೋಪಿಗಳ ಬಂಧನ

Photo Credit : x
ಚಂಡಿಗಢ: ಲುಧಿಯಾನದ ಕಚೇರಿಯಿಂದ ಕಾರ್ಯಾಚರಿಸುತ್ತಿದ್ದ ಎರಡು ನಕಲಿ ಕಾಲ್ ಸೆಂಟರ್ಗಳ ಮೇಲೆ ಸಂಘಟಿತ ದಾಳಿಗಳ ಸಂದರ್ಭ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಪೊಲೀಸರು 132 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 300ಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ.
ದಿಲ್ಲಿ ಮತ್ತು ಗುಜರಾತ್ನಿಂದ ಪ್ರಮುಖ ಸೂತ್ರಧಾರಿಗಳು ನಿರ್ವಹಿಸುತ್ತಿದ್ದ ‘‘ಅಂತರ ರಾಷ್ಟ್ರೀಯ ಸೈಬಲ್ ವಂಚನೆ ಜಾಲ’’ ವನ್ನು ಪೊಲೀಸರು ಬೇಧಿಸಿದ್ದಾರೆ. ಈ ಜಾಲ ಪಾಪ್-ಅಪ್ ಹಗರಣ (ಇದ್ದಕ್ಕಿದ್ದಂತೆ ಪರದೆ ಮೇಲೆ ಕಾಣಿಸುವ ನಕಲಿ ಎಚ್ಚರಿಕೆ ಅಥವಾ ಜಾಹೀರಾತುಗಳ ಮೂಲಕ ಮೋಸ ಮಾಡುವ ವಿಧಾನ)ಗಳು, ರಿಮೋಟ್ ಆಕ್ಸೆಸ್ (ದೂರದಲ್ಲಿರುವ ವ್ಯಕ್ತಿ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ಅಂತರ್ಜಾಲದ ಮೂಲಕ ನಿಯಂತ್ರಿಸುವುದು) ಮತ್ತು ನಕಲಿ ಬ್ಯಾಂಕ್ ಭದ್ರತೆ ಎಚ್ಚರಿಕೆ (ಬ್ಯಾಂಕ್ ಖಾತೆಯ ಸುರಕ್ಷೆಗಾಗಿ ಕಳುಹಿಸುವ ಎಚ್ಚರಿಕೆ ಸಂದೇಶ. ಒಟಿಪಿ, ಲಾಗಿನ್ ಮಾಹಿತಿ ಮೂಲಕ ವಂಚನೆ)ಗಳ ಮೂಲಕ ವಿದೇಶಿ ಪ್ರಜೆಗಳನ್ನು ವಂಚಿಸುತ್ತಿತ್ತು. ಬಳಿಕ ಆ ಹಣವನ್ನು ಕಾನೂನು ಬಾಹಿರ ಮಾರ್ಗಗಳ ಮೂಲಕ ಭಾರತಕ್ಕೆ ರವಾನಿಸುತ್ತಿತ್ತು.
ಈ ಅಪರಾಧದ ಹಣದಿಂದ ಖರೀದಿಸಲಾಗಿದೆ ಎನ್ನಲಾದ 98 ಲ್ಯಾಪ್ಟಾಪ್, 229 ಮೊಬೈಲ್ ಫೋನ್, 19 ವಾಹನಗಳು ಮತ್ತು 1.32 ಕೋಟಿ ರೂ. ನಗದನ್ನು ಲುಧಿಯಾನ ಪೊಲೀಸರ ಸೈಬರ್ ವಿಭಾಗ ವಶಪಡಿಸಿಕೊಂಡಿದೆ.
ಬಂಧಿತ ಆರೋಪಿಗಳಲ್ಲಿ ಹೆಚ್ಚಿನವರು ನೌಕರರಾಗಿ ಕೆಲಸ ಮಾಡುತ್ತಿದ್ದರು. ಅವರು ತಿಂಗಳಿಗೆ 20 ಸಾವಿರ ರೂ.ನಿಂದ 50 ಸಾವಿರ ರೂ. ವರೆಗೆ ಸಂಬಳ ಪಡೆಯುತ್ತಿದ್ದರು. ಈ ಜಾಲದ ವಂಚನೆಯ ತಂತ್ರದ ಬಗ್ಗೆ ಇವರಿಗೆಲ್ಲರಿಗೂ ಅರಿವಿತ್ತು.
ಈ ಗ್ಯಾಂಗ್ನ 13 ತಂಡಗಳು ಸಕ್ರಿಯವಾಗಿದ್ದು, ಒಂದು ತಂಡ ಜನರನ್ನು ವಂಚಿಸುವ ಮೂಲಕ ಪ್ರತಿದಿನ 20,000 ಯುಎಸ್ ಡಾಲರ್ ಅನ್ನು ವಂಚಿಸುತ್ತಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಲುಧಿಯಾನ ಪೊಲೀಸ್ ಆಯುಕ್ತ ಸ್ವಪನ್ ಶರ್ಮಾ, ಖಚಿತ ಮಾಹಿತಿ ಆಧಾರದಲ್ಲಿ ಸಂಧು ಟವರ್ ಮತ್ತು ಸಿಲ್ವರ್ ಓಕ್ ಸಮೀಪದ ವಾಣಿಜ್ಯ ಸಂಸ್ಥೆಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದಿದ್ದಾರೆ.






