Madhya Pradesh | ಗರ್ಬಾ ಕಾರ್ಯಕ್ರಮದಲ್ಲಿ ಬಾಲಕಿ ಜೊತೆ ದುರ್ನಡತೆ ಆರೋಪ; BJP ನಾಯಕನ ವಿರುದ್ಧ FIR ದಾಖಲು

ಇಂದೋರ್, ಅ. 18: ಇಲ್ಲಿ ನಡೆದ ಗರ್ಬಾ ಕಾರ್ಯಕ್ರಮವೊಂದರಲ್ಲಿ ಬಾಲಕಿಯೊಂದಿಗೆ ದುರ್ವರ್ತನೆ ತೋರಿದ ಆರೋಪದಲ್ಲಿ ಸ್ಥಳೀಯ ಬಿಜೆಪಿ ಪದಾಧಿಕಾರಿಯೊಬ್ಬರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಇಂದೋರ್ ವಿಧಾನಸಭಾ ಕ್ಷೇತ್ರ ಸಂಖ್ಯೆ 2ರ ಬಿಜೆಪಿ ಮಂಡಲ ಅಧ್ಯಕ್ಷರಾಗಿರುವ ಆರೋಪಿ ಕಮಲ್ ಚೌಹಾಣ್ ಅವರನ್ನು ಇನ್ನೂ ಬಂಧಿಸಿಲ್ಲ. ಆದರೆ, ಬಿಜೆಪಿ ಅವರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದೆ.
ಅಕ್ಟೋಬರ್ 15ರಂದು ಹೀರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತೆ (ಎಸಿಪಿ) ರೂಬಿನಾ ಮಿಜ್ವಾನಿ ತಿಳಿಸಿದ್ದಾರೆ.
15 ವರ್ಷದ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 74 ಮತ್ತು 75ರ ಅಡಿಯಲ್ಲಿ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಎಸಿಪಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಘಟನೆಯ ವೀಡಿಯೊದಲ್ಲಿ, ಕಮಲ್ ಚೌಹಾಣ್ ಯಾವುದೋ ವಿಷಯಕ್ಕೆ ಕೋಪಗೊಂಡು ಬಾಲಕಿಯ ಬಳಿಗೆ ಬಂದು ಆಕೆಯನ್ನು ತಳ್ಳುವುದು ಕಂಡುಬಂದಿದೆ.
ಆಡಳಿತಾರೂಢ ಬಿಜೆಪಿಯ ಇಂದೋರ್ ಘಟಕದ ಅಧ್ಯಕ್ಷ ಸುಮಿತ್ ಮಿಶ್ರಾ ಅವರು ಚೌಹಾಣ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಅವರ ನಡವಳಿಕೆ ಪಕ್ಷದ ಸಿದ್ಧಾಂತ ಮತ್ತು ಅವರ ಹುದ್ದೆಯ ಜವಾಬ್ದಾರಿಗೆ ವಿರುದ್ಧವಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಮೂರು ದಿನಗಳಲ್ಲಿ ಸ್ಪಷ್ಟನೆ ನೀಡಲು ವಿಫಲವಾದರೆ ಅವರು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ನೋಟಿಸ್ನಲ್ಲಿ ಎಚ್ಚರಿಸಲಾಗಿದೆ.






