ಪ್ರಧಾನಿ ಮೋದಿ, ಆರೆಸ್ಸೆಸ್ ಗೆ ಅಗೌರವ ತರುವ ಕಾರ್ಟೂನ್ ಆರೋಪ: ವ್ಯಂಗ್ಯಚಿತ್ರಕಾರನಿಗೆ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್

ಹೇಮಂತ್ ಮಾಳವೀಯ (Photo: X/@zoo_bear)
ಇಂದೋರ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು 'ಅಗೌರವಯುತ' ರೀತಿಯಲ್ಲಿ ಚಿತ್ರಿಸಿದ ಆರೋಪ ಎದುರಿಸುತ್ತಿರುವ ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯ ಅವರಿಗೆ ಮಧ್ಯಪ್ರದೇಶ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ ಎಂದು barandbench.com ವರದಿ ಮಾಡಿದೆ.
ಜುಲೈ 3 ರಂದು ಹೊರಡಿಸಲಾದ ಆದೇಶದಲ್ಲಿ, ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಅವರು 'ಮಾಳವೀಯ ಅವರು ವಾಕ್ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ವ್ಯಂಗ್ಯಚಿತ್ರವನ್ನು ಬಿಡಿಸುವಾಗ ತಮ್ಮ ವಿವೇಚನೆಯನ್ನು ಬಳಸಬೇಕಾಗಿತ್ತು' ಎಂದು ಹೇಳಿದ್ದಾರೆ.
ಅವರು ಸ್ಪಷ್ಟವಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯನ್ನು ಮೀರಿದ್ದಾರೆ ಎಂದು ನ್ಯಾಯಾಲಯವು ಅವರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುತ್ತಾ ಪ್ರತಿಕ್ರಿಯಿಸಿದೆ.
“ವ್ಯಂಗ್ಯಚಿತ್ರದಲ್ಲಿ ಪ್ರಧಾನ ಮಂತ್ರಿಯೊಂದಿಗೆ ಹಿಂದೂ ಸಂಘಟನೆಯಾದ ಆರೆಸ್ಸೆಸ್ ಅನ್ನು ಚಿತ್ರಿಸುವುದು, ಅದಕ್ಕೆ ಶಿವನ ಹೆಸರನ್ನು ಅನಗತ್ಯವಾಗಿ ಎಳೆದು ತರುವುದು, ಸಂವಿಧಾನದ ಆರ್ಟಿಕಲ್ 19(1)(ಎ) ಅಡಿಯಲ್ಲಿ ಪ್ರತಿಪಾದಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಪೂರ್ಣ ದುರುಪಯೋಗವಲ್ಲದೆ ಬೇರೇನೂ ಅಲ್ಲ, ಮತ್ತು ದೂರುದಾರರು ವಾದಿಸಿದಂತೆ ಅದು ಅಪರಾಧದ ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ” ಎಂದು ನ್ಯಾಯಾಧೀಶರು ಹೇಳಿದರು.







