ಬ್ರಾಹ್ಮಣ, ಮೀಸಲಾತಿ ಕುರಿತು ಹೇಳಿಕೆ : ಐಎಎಸ್ ಅಧಿಕಾರಿಗೆ ನೋಟಿಸ್ ನೀಡಿದ ಮಧ್ಯಪ್ರದೇಶ ಸರಕಾರ

Photo | NDTV
ಭೋಪಾಲ್ : “ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ಕೊಡುವವರೆಗೆ ಮೀಸಲಾತಿ ಮುಂದುವರಿಯಬೇಕು” ಎಂದು ಹೇಳಿದ್ದ ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ನೌಕರರ ಸಂಘ AJAKS ಪ್ರಾಂತೀಯಅಧ್ಯಕ್ಷ, ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಅವರಿಗೆ ಮಧ್ಯಪ್ರದೇಶ ಸರಕಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಬುಧವಾರ ರಾತ್ರಿ ಮಧ್ಯಪ್ರದೇಶದ ಸಾಮಾನ್ಯ ಆಡಳಿತ ಇಲಾಖೆ ಸಂತೋಷ್ ವರ್ಮಾ ಅವರಿಗೆ ನೋಟಿಸ್ ಅನ್ನು ಜಾರಿಗೊಳಿಸಿದೆ. ನವೆಂಬರ್ 23ರಂದು ಎಜೆಎಕೆಎಸ್ ರಾಜ್ಯ ಸಮ್ಮೇಳನದಲ್ಲಿ ಸಂತೋಷ್ ವರ್ಮಾ ನೀಡಿರುವ ಹೇಳಿಕೆಯು, ಐಎಎಸ್ ಅಧಿಕಾರಿಯ ಸೇವಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
ಶೋಕಾಸ್ ನೋಟಿಸ್ ಪ್ರಕಾರ, ಅಖಿಲ ಭಾರತೀಯ ಸೇವೆಗಳು (ನಡತೆ) ನಿಯಮಗಳು-1967ರ ಅನ್ವಯ ಸಂತೋಷ್ ವರ್ಮಾ ತಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದು, ಅಖಿಲ ಭಾರತೀಯ ಸೇವೆಗಳು (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು-1969ರ ಅನ್ವಯ ಶಿಸ್ತು ಕ್ರಮಕ್ಕೆ ಬಾಧ್ಯಸ್ಥರಾಗಿರಲಿದ್ದಾರೆ ಎಂದು ಹೇಳಲಾಗಿದೆ. ತನ್ನ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು 7 ದಿನಗಳೊಳಗಾಗಿ ವಿವರಣೆ ನೀಡಬೇಕು. ಒಂದು ವೇಳೆ ವಿವರಣೆ ನೀಡಲು ವಿಫಲರಾದರೆ, ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರಕಾರ ಅವರಿಗೆ ಎಚ್ಚರಿಕೆ ನೀಡಿದೆ.







