ಮಧ್ಯಪ್ರದೇಶ | ಹೆದ್ದಾರಿ ಮಧ್ಯೆ ಮಹಿಳೆ ಜೊತೆ ಆಕ್ಷೇಪಾರ್ಹ ಕೃತ್ಯ: ವಿಡಿಯೊ ವೈರಲ್ ಬೆನ್ನಲ್ಲೇ ಬಿಜೆಪಿ ನಾಯಕನ ಬಂಧನ

Photo | NDTV
ಭೋಪಾಲ್: ದಿಲ್ಲಿ-ಮುಂಬೈ ಎಕ್ಸ್ಪ್ರೆಸ್ ವೇಯಲ್ಲಿ ಮಹಿಳೆಯೋರ್ವಳ ಜೊತೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವೀಡಿಯೊ ವೈರಲ್ ಬೆನ್ನಲ್ಲೇ ಸ್ಥಳೀಯ ಬಿಜೆಪಿ ನಾಯಕನನ್ನು ಬಂಧಿಸಲಾಗಿದೆ.
ಮಧ್ಯಪ್ರದೇಶದ ಮಂದ್ಸೌರ್ನ ಸ್ಥಳೀಯ ಬಿಜೆಪಿ ನಾಯಕ ಮನೋಹರ್ ಲಾಲ್ ಧಾಕಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕ್ಷೇಪಾರ್ಹ ಕೃತ್ಯ ಎಸಗುತ್ತಿರುವ ವೀಡಿಯೊ ಶನಿವಾರ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಧಾಕಡ್ ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ. ಶರ್ಮಾ ಹೇಳಿದ್ದರು.
ಈ ಕುರಿತು ಮಂದಸೂರ್ ಎಸ್ಪಿ ಅಭಿಷೇಕ್ ಆನಂದ್ ಪ್ರತಿಕ್ರಿಯಿಸಿ, ಮೇ 13ರಂದು ಈ ಕುರಿತ ವಿಡಿಯೋ ವೈರಲ್ ಆಗಿದೆ. ಭಾನ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಆರೋಪಿ ಮನೋಹರ್ ಲಾಲ್ ಧಾಕಡ್ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಭಾನ್ಪುರ ಠಾಣೆಯ ಉಸ್ತುವಾರಿ ಆರ್.ಸಿ.ಡಾಂಗಿ ಈ ಕುರಿತು ಪ್ರತಿಕ್ರಿಯಿಸಿ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 296, 285 ಮತ್ತು 3(5) ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆದರೆ, ವೀಡಿಯೊವನ್ನು ವೈರಲ್ ಮಾಡಿದವರು ಯಾರು ಮತ್ತು ಅದರ ಹಿಂದಿನ ಉದ್ದೇಶವನ್ನು ನಾವು ನಿರ್ಧರಿಸಬೇಕಾಗಿರುವುದರಿಂದ ಈ ಕುರಿತು ಮತ್ತಷ್ಟು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.





