Madhya Pradesh | ಲಾಡ್ಜ್ ಕುಸಿದು ಇಬ್ಬರು ಮೃತ್ಯು; ಮುಂದುವರಿದ NDRF ರಕ್ಷಣಾ ಕಾರ್ಯಾಚರಣೆ

PC : PTI
ಅನುಪ್ಪುರ್ (ಮಧ್ಯಪ್ರದೇಶ), ಎ.5: ಜಿಲ್ಲೆಯ ಕೋಟ್ಮಾ ಪಟ್ಟಣದಲ್ಲಿ ನಾಲ್ಕು ಅಂತಸ್ತಿನ ಲಾಡ್ಜ್ ಕುಸಿದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಕೋಟ್ಮಾ ಬಸ್ ನಿಲ್ದಾಣದ ಸಮೀಪದಲ್ಲಿರುವ ‘ಅಗರ್ವಾಲ್ ಲಾಡ್ಜ್’ ಕಟ್ಟಡವು ಶನಿವಾರ ಸಂಜೆ ಸುಮಾರು 5.30ರ ವೇಳೆಗೆ ಕುಸಿದಿದೆ. ಘಟನೆಯ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಜನ ಸಂಚಾರ ಹೆಚ್ಚಾಗಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ.
ಐದು ಮಂದಿಯನ್ನು ಅವಶೇಷಗಳಿಂದ ಹೊರತೆಗೆದಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡ ಐವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಹದೋಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಹನುಮಾನ್ ದೀನ್ ಯಾದವ್ (55) ಮತ್ತು ರಾಮಕೃಪಾಲ್ ಯಾದವ್ (50) ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋತಿ ಉರ್ ರೆಹಮಾನ್ ತಿಳಿಸಿದ್ದಾರೆ.
ಸುಮಾರು 10 ವರ್ಷ ಹಳೆಯ ಕಟ್ಟಡದ ಪಕ್ಕದಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾರ್ಯವೇ ಕುಸಿತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಹರ್ಷಲ್ ಪಂಚೋಲಿ ಅವರು, ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಟ್ಟಡ ಕುಸಿಯುವ ವೇಳೆ ಭಾರಿ ಸದ್ದು ಕೇಳಿಬಂದಿದ್ದು, ಧೂಳು ಇಡೀ ಪ್ರದೇಶವನ್ನು ಆವರಿಸಿತು. ಘಟನೆ ವೇಳೆ ಬಸ್ ನಿಲ್ದಾಣ ಪ್ರದೇಶ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು.
ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿಲೀಪ್ ಅಹಿರ್ವಾರ್ ಮತ್ತು ಕಾಟೇಜ್ ಹಾಗೂ ಗ್ರಾಮೋದ್ಯೋಗ ಸಚಿವ ದಿಲೀಪ್ ಜೈಸ್ವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದರು.







