Madhya Pradesh | ಒಂದೇ ಒಂದು ಇಟ್ಟಿಗೆಯನ್ನೂ ಇಟ್ಟಿಲ್ಲ; 6 ವರ್ಷಗಳಿಂದ ‘ಕಾಗದದ ಮೇಲೆಯೇ’ ಕಾರ್ಯನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಸಾಂದರ್ಭಿಕ ಚಿತ್ರ (AI)
ಇಂದೋರ್, ಜು. 5: ಮಧ್ಯಪ್ರದೇಶದ ಇಂದೋರ್ನ ಖಜ್ರಾನಾ ಪ್ರದೇಶದಲ್ಲಿ ಪ್ರಸ್ತಾವಿತ 100 ಹಾಸಿಗೆಗಳ ನಾಗರಿಕ ಆಸ್ಪತ್ರೆಯೊಂದು ಕಳೆದ ಆರು ವರ್ಷಗಳಿಂದ ‘ಕಾಗದದ ಮೇಲೆ’ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಚ್ಚರಿಯ ಸಂಗತಿಯೆಂದರೆ, ಈ ಆಸ್ಪತ್ರೆಯ ನಿರ್ಮಾಣಕ್ಕಾಗಿ ಇದುವರೆಗೆ ಒಂದೇ ಒಂದು ಇಟ್ಟಿಗೆಯನ್ನೂ ಹಾಕಿಲ್ಲ. ಅಲ್ಲದೆ, ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವಿರುವ ಅಂತಿಮ ಭೂಮಿಯನ್ನೂ ಇನ್ನೂ ಗುರುತಿಸಲಾಗಿಲ್ಲ.
ಆರು ವರ್ಷಗಳ ಹಿಂದೆ ಮಧ್ಯಪ್ರದೇಶ ಸರ್ಕಾರವು ಖಜ್ರಾನಾ ಪ್ರದೇಶದಲ್ಲಿ ಆಧುನಿಕ ನಾಗರಿಕ ಆಸ್ಪತ್ರೆ ಸ್ಥಾಪಿಸುವುದಾಗಿ ಘೋಷಿಸಿತ್ತು. ಆದರೆ, ಸೂಕ್ತ ಸ್ಥಳದ ಹುಡುಕಾಟದಲ್ಲಿ ವಿಳಂಬ ಉಂಟಾದರೂ, ಆಡಳಿತಾತ್ಮಕ ಪ್ರಕ್ರಿಯೆಗಳು ಮಾತ್ರ ನಿರಂತರವಾಗಿ ಮುಂದುವರಿದಿವೆ.
ಆಸ್ಪತ್ರೆಗಾಗಿ ವೈದ್ಯರು, ದಾದಿಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 87 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಈ ಹುದ್ದೆಗಳನ್ನು ಭರ್ತಿ ಮಾಡಲು ನಿಯಮಿತವಾಗಿ ನೇಮಕಾತಿ ಮತ್ತು ವರ್ಗಾವಣೆ ಪ್ರಕ್ರಿಯೆಗಳನ್ನು ಸಹ ಕೈಗೊಳ್ಳಲಾಗಿದೆ.
ಪ್ರಸ್ತುತ, ಈ ಆಸ್ಪತ್ರೆಗೆ ನಿಯೋಜಿಸಲಾದ ಸುಮಾರು 80 ಸಿಬ್ಬಂದಿ ಇಂದೋರ್ನ ಪಿಸಿ ಸೇಥಿ ಆಸ್ಪತ್ರೆ, ಹುಕುಮ್ಚಂದ್ ಆಸ್ಪತ್ರೆ ಹಾಗೂ ನಗರದ ವಿವಿಧ ಸಂಜೀವಿನಿ ಚಿಕಿತ್ಸಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಯೋಜನೆಯ ಹಿನ್ನೆಲೆಯನ್ನು ವಿವರಿಸಿದ್ದಾರೆ.
"ಆರಂಭದಲ್ಲಿ ಈ ಪ್ರದೇಶದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಅದನ್ನು 50 ಹಾಸಿಗೆಗಳ ನಾಗರಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಯಿತು. ನಂತರ 100 ಹಾಸಿಗೆಗಳ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಯಿತು. ಆದರೆ, ಸೂಕ್ತ ಸರ್ಕಾರಿ ಭೂಮಿ ಲಭ್ಯವಾಗದ ಕಾರಣ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆ ಕಟ್ಟಡ ನಿರ್ಮಾಣವಾಗುವವರೆಗೆ ಮಂಜೂರಾದ ಸಿಬ್ಬಂದಿಯನ್ನು ಇತರ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಿಗೆ ನಿಯೋಜಿಸಲಾಗಿದೆ. ಭೂಮಿಯ ಹುಡುಕಾಟ ಪ್ರಕ್ರಿಯೆ ಇನ್ನೂ ಮುಂದುವರಿದಿದೆ" ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಪ್ರತಿಪಕ್ಷವು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಅಸ್ತಿತ್ವದಲ್ಲೇ ಇಲ್ಲದ ಆಸ್ಪತ್ರೆಗಾಗಿ ಹಲವು ವರ್ಷಗಳಿಂದ ನೇಮಕಾತಿ ಮತ್ತು ವರ್ಗಾವಣೆಗಳನ್ನು ಹೇಗೆ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಸಜ್ಜನ್ ಸಿಂಗ್ ವರ್ಮಾ ಪ್ರಶ್ನಿಸಿದ್ದಾರೆ.
"ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತೇವೆ. ಸರ್ಕಾರದಿಂದ ಸಮಗ್ರ ಉತ್ತರಗಳನ್ನು ಕೋರುತ್ತೇವೆ. ಅಲ್ಲದೆ, ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು" ಎಂದು ವರ್ಮಾ ಆಗ್ರಹಿಸಿದ್ದಾರೆ.
ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಡಾ. ಮಾಧವ್ ಹಸಾನಿ ಅವರು ಪ್ರತಿಕ್ರಿಯಿಸಿ, "ನಗರ ವ್ಯಾಪ್ತಿಯೊಳಗೆ ದೊಡ್ಡ ಪ್ರಮಾಣದ ಸರ್ಕಾರಿ ಭೂಮಿಯನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ಇದೇ ಕಾರಣದಿಂದ ಆಸ್ಪತ್ರೆ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಈ ಮಧ್ಯೆ, ನರ್ಸಿಂಗ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಅವರನ್ನು ಸಂಜೀವಿನಿ ಚಿಕಿತ್ಸಾಲಯಗಳು ಹಾಗೂ ಇತರ ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ.






