Madhya Pradesh | ಉದ್ಯೋಗದ ಆಮಿಷವೊಡ್ಡಿ ಮಹಿಳೆಯರ ಮೇಲೆ ಅತ್ಯಾಚಾರ: ಮೂವರ ಬಂಧನ

ಸಾಂದರ್ಭಿಕ ಚಿತ್ರ PC: PTI
ಭೋಪಾಲ್: ಸೆಕ್ಸ್ ಮತ್ತು ಡ್ರಗ್ಸ್ ಜಾಲವನ್ನು ಭೇದಿಸಿದ ಮಧ್ಯಪ್ರದೇಶ ಪೊಲೀಸರು ಇಬ್ಬರು ಸಹೋದರಿಯರು ಸೇರಿದಂತೆ ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.
ಯುವತಿಯರಿಗೆ ಉದ್ಯೋಗ ಒದಗಿಸುವ ನೆಪದಲ್ಲಿ ಅತ್ಯಾಚಾರ, ಅಪರಾಧ ಪಿತೂರಿ ಮತ್ತು ಲೈಂಗಿಕ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರು ಸಹೋದರಿಯರು ಮತ್ತು ಆ ಪೈಕಿ ಒಬ್ಬಾಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಬಗ್ಸೇವಾನಿಯಾ ಪೊಲೀಸರು ಹೇಳಿದ್ದಾರೆ. ಇತರ ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದು, ಅವರು ತಲೆ ಮರೆಸಿಕೊಂಡಿದ್ದಾರೆ.
ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 64 (ಅತ್ಯಾಚಾರ), 123 (ಡ್ರಗ್ಸ್ ನೀಡಿ ಅಪರಾಧ ಎಸಗುವುದು), 351 (ಅಪರಾಧ ಪಿತೂರಿ) ಅನ್ವಯ ಹಾಗೂ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ಛತ್ತೀಸ್ಗಢದ 21 ವರ್ಷದ ಹಾಗೂ ಭೋಪಾಲ್ ನ 30 ವರ್ಷದ ಇಬ್ಬರು ಮಹಿಳೆಯರು ಭಾನುವಾರ ರಾತ್ರಿ ಠಾಣೆಗೆ ಭೇಟಿ ನೀಡಿ ಈ ಸಂಬಂಧ ದೂರು ನೀಡಿದ್ದರು. ಉದ್ಯೋಗ ಅವಕಾಶ ಮತ್ತು ವಸತಿ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆಪಾದಿಸಿದ್ದರು. ಮಾದಕ ವಸ್ತುಗಳನ್ನು ಸೇವಿಸುವಂತೆ ಮಾಡಿ ಭೋಪಾಲ್, ಮುಂಬೈ ಹಾಗೂ ಗುಜರಾತ್ ನಲ್ಲಿ ಹಲವು ಮಂದಿ ಅತ್ಯಾಚಾರ ಎಸಗಿದ್ದಾಗಿ ದೂರಿದ್ದರು. ಈ ಬಗ್ಗೆ ವಿಚಾರಣೆ ನಡೆಸಲು ಪೊಲೀಸರು ಅಹ್ಮದಾಬಾದ್ ಗೆ ತೆರಳಿದ್ದಾರೆ.
ಇಬ್ಬರು ಮಹಿಳೆಯರು ಮಂಗಳವಾರ ತಮ್ಮ ನಿದರ್ಶನಗಳನ್ನು ಎಫ್ಐಆರ್ ನಲ್ಲಿ ಮತ್ತು ನ್ಯಾಯಾಲಯದಲ್ಲಿ ದೃಢಪಡಿಸಿದ್ದಾರೆ ಎಂದು ಠಾಣಾಧಿಕಾರಿ ಅಮಿತ್ ಸೋನಿ ಹೇಳಿದ್ದಾರೆ. ತಮ್ಮ ಜತೆ ಹಲವು ಮಂದಿ ಮಹಿಳೆಯರು ಈ ದಂಧೆಯಿಂದ ಸಂತ್ರಸ್ತರಾಗಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ. ಕೊಳಗೇರಿ ನಿವಾಸಿಗಳಾಗಿದ್ದ ಆರೋಪಿ ಸಹೋದರಿಯರು ಐಷಾರಾಮಿ ಮನೆ, ಕಾರುಗಳನ್ನು ಹೊಂದಿದ್ದಲ್ಲದೇ ವಿಮಾನದಲ್ಲಿ ಪ್ರಯಾಣಿಸುವಷ್ಟು ಹಣ ಸಂಪಾದಿಸಿದ್ದರು ಎಂದು ಸೋನಿ ತಿಳಿಸಿದ್ದಾರೆ.







