Madhya Pradesh | ಪ್ರವಾಹದ ಹಳ್ಳದಲ್ಲಿ ಕೊಚ್ಚಿಹೋದ ವ್ಯಾನ್: ಒಂದೇ ಕುಟುಂಬದ 9 ಮಂದಿ ಮೃತ್ಯು

Photo Credit: X/ANI
ಭೋಪಾಲ್: ಪ್ರವಾಹಕ್ಕೆ ಸಿಲುಕಿದ್ದ ಹಳ್ಳವನ್ನು ದಾಟಲು ಪ್ರಯತ್ನಿಸುವ ವೇಳೆ ವ್ಯಾನ್ ಕೊಚ್ಚಿಹೋಗಿ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಲ್ಲಿ ನಡೆದಿದೆ.
ನೆರೆಯ ದೇವಾಸ್ ಜಿಲ್ಲೆಯ ಸತ್ವಾಸ್ನಿಂದ ರಾಜ್ಗಢದ ಕಡ್ಲಾವಾಡ್ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಮಾರುತಿ ಇಕೋ ವಾಹನದಲ್ಲಿ ಚಾಲಕ ಸೇರಿದಂತೆ 11 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಚಾಲಕ ಮುಖೇಶ್ ಸಿಂಗ್ ವಾಹನ ಚಲಾಯಿಸುತ್ತಿದ್ದಾಗ ಪಚೋರ್–ಸಾರಂಗ್ಪುರ ರಸ್ತೆಯಲ್ಲಿರುವ ಚಹಾ ಅಂಗಡಿಯೊಂದರ ಬಳಿ ಗ್ರಾಮಸ್ಥರು ಅವರನ್ನು ತಡೆದು, ಆ ಮಾರ್ಗದಲ್ಲಿ ಮುಂದುವರಿಯದಂತೆ ಎಚ್ಚರಿಸಿದ್ದರು. ನಿರ್ಮಾಣ ಹಂತದಲ್ಲಿದ್ದ ಕಿರು ಸೇತುವೆ ಮುಳುಗಡೆಯಾಗಿದ್ದು, ಅದರ ಕೆಳಗಿನ ಹಳ್ಳದಲ್ಲಿ ಅಪಾಯಕಾರಿ ರೀತಿಯಲ್ಲಿ ಪ್ರವಾಹದ ನೀರು ಹರಿಯುತ್ತಿದೆ ಎಂದು ಗ್ರಾಮಸ್ಥರು ಚಾಲಕನಿಗೆ ತಿಳಿಸಿದ್ದರು. ಪರ್ಯಾಯ ಹಳೆಯ ಮಾರ್ಗದಲ್ಲಿ ತೆರಳುವಂತೆ ಸಲಹೆ ನೀಡಿದ್ದರೂ, ಮುಖೇಶ್ ಮುಳುಗಡೆಯಾಗಿದ್ದ ಕಿರು ಸೇತುವೆಯ ಮೇಲೆಯೇ ವಾಹನ ಚಲಾಯಿಸಿದ್ದಾರೆ. ಪರಿಣಾಮ, ವ್ಯಾನ್ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿದೆ.
ವ್ಯಾನ್ ಕೊಚ್ಚಿಹೋಗುತ್ತಿರುವುದನ್ನು ಕಂಡ ಗ್ರಾಮಸ್ಥರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಚಾಲಕ ಮುಖೇಶ್ ಸಿಂಗ್ ಹಾಗೂ ಹುಕುಮ್ ಸಿಂಗ್ ಅವರನ್ನು ರಕ್ಷಿಸಲಾಗಿದ್ದು, ಕುಟುಂಬದ ಉಳಿದ ಒಂಬತ್ತು ಮಂದಿ ನಾಪತ್ತೆಯಾಗಿದ್ದರು.
ಬಳಿಕ ಪೊಲೀಸರು ಹಾಗೂ ಎಸ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದವು. ಕೆಲವು ಗಂಟೆಗಳ ಬಳಿಕ ಮೂವರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದಂತೆ ನಾಪತ್ತೆಯಾಗಿದ್ದ ಒಂಬತ್ತು ಮಂದಿಯ ಮೃತದೇಹಗಳು ಪತ್ತೆಯಾಗಿವೆ.
ಮೃತರನ್ನು ಮಧ್ಯವಯಸ್ಕ ದಂಪತಿ ಶಂಕರ್ ಸಿಂಗ್ ಮತ್ತು ಸಾಗರ್ ಬಾಯಿ, ಹುಕುಮ್ ಸಿಂಗ್ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು, ಯುವ ದಂಪತಿ ವಿಶಾಲ್ ಮತ್ತು ಪೂಜಾ ಚೌಹಾಣ್ ಮತ್ತು ಇತರ ಇಬ್ಬರು ಎಂದು ಗುರುತಿಸಲಾಗಿದೆ.
ಬಳಿಕ ಕ್ರೇನ್ ಸಹಾಯದಿಂದ ಪ್ರವಾಹದ ಹಳ್ಳದಿಂದ ವ್ಯಾನ್ ಅನ್ನು ಹೊರತೆಗೆಯಲಾಯಿತು.
ಸ್ಥಳೀಯ ಪೊಲೀಸ್ ಚೌಕಿ ಘಟನಾ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದರೂ, ಭಾರಿ ಮಳೆಯ ನಡುವೆ ವಾಹನಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲು ಯಾವುದೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ ಎನ್ನಲಾಗಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ *4 ಲಕ್ಷ ರೂ. ಪರಿಹಾರ* ಘೋಷಿಸಿದ್ದಾರೆ.
ಈ ಮಧ್ಯೆ, ರಾತ್ರಿಯಿಡೀ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ರಾಜ್ಯ ರಾಜಧಾನಿ ಭೋಪಾಲ್ ಸೇರಿದಂತೆ ಮಧ್ಯಪ್ರದೇಶದ ಕೇಂದ್ರ ಭಾಗದ ಹಲವು ಪ್ರದೇಶಗಳು ತೀವ್ರವಾಗಿ ಬಾಧಿತವಾಗಿವೆ. ಕಳೆದ 24 ಗಂಟೆಗಳಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಕನಿಷ್ಠ 98 ಮಂದಿಯನ್ನು ಹೋಮ್ ಗಾರ್ಡ್ಗಳು ಮತ್ತು ಎಸ್ಡಿಇಆರ್ಎಫ್ ತಂಡಗಳು ರಕ್ಷಿಸಿವೆ.






