ಅಪ್ರಾಪ್ತ ವಯಸ್ಕ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯ ಮರಣದಂಡನೆ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

Photo : PTI
ಚೆನ್ನೈ, ಎ.24: ತನ್ನ ಅಪ್ರಾಪ್ತ ವಯಸ್ಕ ಪುತ್ರಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯಾಗಿಸಿದ್ದ ಮದ್ಯಪಾನಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ.
ಮರುಗನ್ ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸಾಯುವವರೆಗೂ ಜೈಲುಶಿಕ್ಷೆಯನ್ನಾಗಿ ಪರಿವರ್ತಿಸಿ ಆದೇಶಿಸಿರುವ ನ್ಯಾಯಮೂರ್ತಿಗಳಾದ ಎನ್. ಆನಂದ ವೆಂಕಟೇಶ ಮತ್ತು ಕೆ. ಕೆ. ರಾಮಕೃಷ್ಣನ್ ಅವರ ಪೀಠವು, ಆರೋಪಿ ಈಗಾಗಲೇ ತನ್ನ ಕುಟುಂಬ, ಗ್ರಾಮ ಮತ್ತು ಸಮಾಜದಿಂದ ಸಂಪೂರ್ಣ ದೂರವಾಗಿ ‘ಕಠಿಣ ಏಕಾಂತ’ದಲ್ಲಿ ಬದುಕುತ್ತಿದ್ದಾನೆ ಎಂದು ಗಮನಿಸಿದೆ.
ಇದು ಒಂದು ರೀತಿಯ ‘ಜೀವಂತ ವನವಾಸ’ವಾಗಿದೆ. ಮರಣದಂಡನೆಗಿಂತ ಜೀವಾವಧಿ ಶಿಕ್ಷೆಯು ಹೆಚ್ಚು ಕಠಿಣವಾಗಬಹುದು. ಇದು ಅಪರಾಧಿಯು ತನ್ನ ಕೃತ್ಯದ ಬಗ್ಗೆ ಪ್ರತಿದಿನವೂ ಪಶ್ಚಾತ್ತಾಪ ಪಡುವಂತೆ ಮಾಡುತ್ತದೆ ಮತ್ತು ಆತನ ಮೇಲೆ ಮಾನಸಿಕ ಹೊರೆಯನ್ನು ಹೊರಿಸುತ್ತದೆ. ಅವನು ತನ್ನ ತಪ್ಪಿನ ಭಾರವನ್ನು ಜೀವಿತಾವಧಿಯವರೆಗೂ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಪೀಠವು ಹೇಳಿದೆ.
ಜ. 2026ರಲ್ಲಿ ವಿಚಾರಣಾ ನ್ಯಾಯಾಲಯವು ಮರುಗನ್ ಗೆ ವಿಧಿಸಿದ್ದ ಮರಣದಂಡನೆಯನ್ನು ರದ್ದುಗೊಳಿಸಿದ ಉಚ್ಚ ನ್ಯಾಯಾಲಯವು, ವಿಚಾರಣಾ ನ್ಯಾಯಾಧೀಶರು ‘ಭಾವನೆ ಮತ್ತು ಅಪರಾಧದ ಭಯಾನಕತೆಯಿಂದ’ ಪ್ರಭಾವಿತರಾಗಿದ್ದರು ಹಾಗೂ ಆರೋಪಿಗೆ ಕಾನೂನು ನೆರವಿನಲ್ಲಿ ಕೊರತೆಯಿತ್ತು ಮತ್ತು ಆತನ ಶಿಕ್ಷೆಯ ಕುರಿತು ಸಮಂಜಸ ವಿಚಾರಣೆ ನಡೆದಿರಲಿಲ್ಲ ಎನ್ನುವುದನ್ನು ಗಮನಿಸಿರಲಿಲ್ಲ ಎಂದು ತಿಳಿಸಿತು.
ನ್ಯಾಯದ ಹೆಸರಿನಲ್ಲಿ ಜೀವವನ್ನು ತೆಗೆದುಕೊಳ್ಳುವುದು ಅತ್ಯಂತ ಕಠಿಣ ಕಾರ್ಯ. ಆದರೆ ಕಾನೂನು ಅವಕಾಶ ನೀಡಿದಾಗ ಅದನ್ನು ಉಳಿಸುವುದು ಅತ್ಯುತ್ತಮ ಬುದ್ಧಿವಂತಿಕೆ ಎಂದು ಹೇಳಿದ ಉಚ್ಚ ನ್ಯಾಯಾಲಯವು, ಮರಣದಂಡನೆಯನ್ನು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ನೀಡಬೇಕು. ಈ ಪ್ರಕರಣದಲ್ಲಿ ಜೀವಿತಾವಧಿ ಶಿಕ್ಷೆಯೇ ಸೂಕ್ತವಾಗಿದೆ ಎಂದು ತಿಳಿಸಿತು.
ಕಳೆದ ವರ್ಷದ ಡಿಸೆಂಬರ್ನಲ್ಲಿ ತಿರುನೆಲ್ವೆಲಿಯ ವಿಶೇಷ ಪೊಕ್ಸೊ ನ್ಯಾಯಾಲಯವು ತನ್ನ 14ರ ಹರೆಯದ ಪುತ್ರಿಯ ಮೇಲೆ ಗಂಭೀರ ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಆರೋಪದಲ್ಲಿ ಮರುಗನ್ ನನ್ನು ದೋಷಿಯೆಂದು ಘೋಷಿಸಿತ್ತು ಮತ್ತು ಜನವರಿ 2026ರಲ್ಲಿ ಮರಣದಂಡನೆಯನ್ನು ವಿಧಿಸಿತ್ತು.
ತಾಯಿ ಕೃಷಿ ಕೆಲಸಕ್ಕೆ ತೆರಳಿದಾಗ ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಆತ ತನ್ನನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದರಿಂದ ತಾನು ಸುಮ್ಮನಿದ್ದೆ. ಮದ್ಯದ ಅಮಲಿನಲ್ಲಿ ಆತ ಕನಿಷ್ಠ 20 ಸಲ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಎಂದು ಸಂತ್ರಸ್ತ ಬಾಲಕಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಳು.
ಮಗಳ ಶರೀರದಲ್ಲಿ ಬದಲಾವಣೆಯನ್ನು ಗಮನಿಸಿದ್ದ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಳು. ಆಕೆ ಗರ್ಭಿಣಿಯಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿತ್ತು. ಪೊಕ್ಸೊ ಕಾಯ್ದೆಯಡಿ ಇಂತಹ ಪ್ರಕರಣಗಳನ್ನು ಕಡ್ಡಾಯವಾಗಿ ವರದಿ ಮಾಡಬೇಕು. ಹೀಗಾಗಿ ಆಸ್ಪತ್ರೆ ಸಿಬ್ಬಂದಿಗಳು ಪೋಲಿಸರಿಗೆ ಮಾಹಿತಿ ನೀಡಿದ್ದರು.






