ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಶಂಕರಾಚಾರ್ಯ ಬಿರುದಿನ ಕುರಿತು ಪ್ರಶ್ನಿಸಿದ ಮಾಘ ಮೇಳ ಪ್ರಾಧಿಕಾರ

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ | Photo Credit : PTI
ಪ್ರಯಾಗರಾಜ್: ಮಾಘ ಮೇಳ ಸಂದರ್ಭದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವುದನ್ನು ಅಧಿಕಾರಿಗಳು ತಡೆದ ನಂತರ ಸೃಷ್ಟಿಯಾಗಿರುವ ವಿವಾದದ ನಡುವೆ ಮೇಳದ ಆಡಳಿತವು, ಅವರು ಜ್ಯೋತಿಷ್ ಪೀಠದ ಶಂಕರಾಚಾರ್ಯ ಬಿರುದನ್ನು ಹೇಗೆ ಬಳಸುತ್ತಿದ್ದಾರೆ ಎನ್ನುವುದನ್ನು ವಿವರಿಸುವಂತೆ ಕೋರಿ ಅವರಿಗೆ ನೋಟಿಸ್ ಹೊರಡಿಸಿದೆ.
ರವಿವಾರ ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ ಸರಸ್ವತಿ ತನ್ನ ಬೆಂಬಲಿಗರೊಂದಿಗೆ ಸಂಗಮದಲ್ಲಿ ಸ್ನಾನ ಮಾಡಲು ತೆರಳುತ್ತಿದ್ದಾಗ ಪೋಲಿಸರು ಅವರನ್ನು ತಡೆದಿದ್ದರು ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಸರಸ್ವತಿ ತನ್ನ ಶಿಬಿರದ ಹೊರಗೆ ಆಹಾರ ಮತ್ತು ನೀರನ್ನು ತ್ಯಜಿಸಿ ಪ್ರತಿಭಟನೆಯನ್ನು ನಡೆಸಿದ್ದರು ಹಾಗೂ ಮೇಳದ ಆಡಳಿತ ಮತ್ತು ಪೋಲಿಸರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. ಅವರ ಪ್ರತಿಭಟನೆ ಮಂಗಳವಾರವೂ ಮುಂದುವರಿದಿದೆ.
ಪ್ರಯಾಗರಾಜ್ ಮೇಳ ಪ್ರಾಧಿಕಾರದ ಉಪಾಧ್ಯಕ್ಷ ದಯಾನಂದ ಪ್ರಸಾದ ಅವರು ಹೊರಡಿಸಿರುವ ನೋಟಿಸ್ನಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಾಕಿಯಿರುವ ಸಿವಿಲ್ ಮೇಲ್ಮನವಿಯನ್ನೂ ಉಲ್ಲೇಖಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಮೇಲ್ಮನವಿಯು ಇತ್ಯರ್ಥಗೊಳ್ಳುವವರೆಗೆ ಯಾವುದೇ ಧಾರ್ಮಿಕ ನಾಯಕರನ್ನು ಜ್ಯೋತಿಷ್ ಪೀಠದ ಶಂಕರಾಚಾರ್ಯರನ್ನಾಗಿ ಪ್ರತಿಷ್ಠಾಪಿಸುವಂತಿಲ್ಲ ಎಂದು ಆದೇಶಿಸಿತ್ತು.
ಯಾವುದೇ ಧಾರ್ಮಿಕ ನಾಯಕರು ಜ್ಯೋತಿಷ್ಯಪೀಠದ ಶಂಕರಾಚಾರ್ಯರಾಗಿ ನೇಮಕಗೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ, ಆದರೂ ಸರಸ್ವತಿಯವರು ಪ್ರಯಾಗರಾಜ್ ಮಾಘ ಮೇಳದಲ್ಲಿಯ ತನ್ನ ಶಿಬಿರದಲ್ಲಿಯ ಫಲಕದಲ್ಲಿ ತನ್ನನ್ನು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಎಂದು ಘೋಷಿಸಿಕೊಂಡಿದ್ದಾರೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
‘ನಿಮ್ಮ ಈ ಕೃತ್ಯ/ಪ್ರದರ್ಶನವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿರುವುದನ್ನು ತೋರಿಸುತ್ತಿದೆ. ಈ ಪತ್ರವು ನಿಮ್ಮ ಕೈಸೇರಿದ 24 ಗಂಟೆಗಳಲ್ಲಿ ನಿಮ್ಮ ಹೆಸರಿನ ಮೊದಲು ಶಂಕರಾಚಾರ್ಯ ಪದವನ್ನು ಹೇಗೆ ಬಳಸುತ್ತಿದ್ದೀರಿ ಎನ್ನುವುದನ್ನು ಸ್ಪಷ್ಟಪಡಿಸಿ ಎಂದೂ ನೋಟಿಸ್ನಲ್ಲಿ ತಿಳಿಸಲಾಗಿದೆ.
ನೋಟಿಸ್ಗೆ ಪ್ರತಿಕ್ರಿಯಿಸಿದ ಸರಸ್ವತಿಯವರ ಮಾಧ್ಯಮ ಉಸ್ತುವಾರಿ ಶೈಲೇಂದ್ರ ಯೋಗಿರಾಜ ಅವರು, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೂ ಮುನ್ನವೇ ಜೋತಿಷ್ಯ ಪೀಠದ ಶಂಕರಾಚಾರ್ಯರಾಗಿ ಪ್ರತಿಷ್ಠಾಪಿಸಲ್ಪಟ್ಟಿದ್ದಾರೆ ಎಂದು ಹೇಳಿದರು.
ಮೌನಿ ಅಮವಾಸ್ಯೆಯಂದು ಸರಸ್ವತಿಯವರು ಸಂಗಮದಲ್ಲಿ ಸ್ನಾನ ಮಾಡಲು ಅನುಯಾಯಿಗಳೊಂದಿಗೆ ತನ್ನ ಪಲ್ಲಕ್ಕಿಯಲ್ಲಿ ಶಾಂತಿಯುತವಾಗಿ ಸಾಗುತ್ತಿದ್ದಾಗ ಪೋಲಿಸರು ಪಲ್ಲಕ್ಕಿಯಿಂದ ಇಳಿದು ಸ್ನಾನ ಘಟ್ಟಕ್ಕೆ ನಡೆದುಕೊಂಡು ಹೋಗುವಂತೆ ಅವರಿಗೆ ಸೂಚಿಸಿದ್ದರು. ಪಲ್ಲಕ್ಕಿಯಿಂದ ಇಳಿಯಲು ಅವರು ನಿರಾಕರಿಸಿದಾಗ ಪೋಲಿಸರು ಅವರ ಬೆಂಬಲಿಗರನ್ನು ಥಳಿಸಿದ್ದು, 15 ಜನರು ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಸ್ವಾಮೀಜಿಯವರು ಪೋಲಿಸರು ಮತ್ತು ಮೇಳದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಆಡಳಿತವು ಕ್ಷಮೆ ಕೋರುವವರೆಗೆ ಮತ್ತು ಶಿಷ್ಟಾಚಾರಕ್ಕೆ ಅನುಗುಣವಾಗಿ ಅವರ ಸ್ನಾನಕ್ಕೆ ವ್ಯವಸ್ಥೆ ಮಾಡುವವರೆಗೂ ಸ್ವಾಮೀಜಿ ತನ್ನ ಶಿಬಿರವನ್ನು ಪ್ರವೇಶಿಸುವುದಿಲ್ಲ ಎಂದೂ ಯೋಗಿರಾಜ ತಿಳಿಸಿದರು.
ಸರಸ್ವತಿ ಮತ್ತು ಅವರ ಅನುಯಾಯಿಗಳು ಬ್ಯಾರಿಕೇಡ್ಗಳನ್ನು ಭೇದಿಸಿ ಸಂಗಮಕ್ಕೆ ಬಂದಿದ್ದರು,ಕಾಲ್ತುಳಿತವನ್ನು ತಪ್ಪಿಸಲು ಆಡಳಿತವು ಕ್ರಮ ತೆಗೆದುಕೊಂಡಿತ್ತು ಎಂದು ಮೇಳದ ಅಧಿಕಾರಿ ರಿಷಿರಾಜ್ ಪ್ರತಿಪಾದಿಸಿದರು.







