ಮಹಾರಾಷ್ಟ್ರ | ‘ಡ್ರಗ್ ಪಾರ್ಟಿ’ ಭೇದಿಸಿದ ಪೊಲೀಸರು
ಏಕನಾಥ್ ಖಡ್ಸೆ ಅಳಿಯ ಸೇರಿದಂತೆ 7 ಮಂದಿಯ ಬಂಧನ

PC : X
ಪುಣೆ, ಜು. 27: ಇಲ್ಲಿನ ಖಾಸಗಿ ಅಪಾರ್ಟ್ ಮೆಂಟ್ ನ ಮೇಲೆ ಪುಣೆ ಪೊಲೀಸರು ರವಿವಾರ ಮುಂಜಾನೆ ದಾಳಿ ನಡೆಸಿ ಡ್ರಗ್ಸ್ ಪಾರ್ಟಿಯನ್ನು ಬೇಧಿಸಿದ್ದಾರೆ. ಸ್ಥಳದಿಂದ ಮಾದಕ ವಸ್ತು, ಹುಕ್ಕಾ ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡ್ಸೆ ಅಳಿಯ ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ.
ನ್ಯಾಯಾಲಯ ಎಲ್ಲಾ 7 ಮಂದಿಯನ್ನು ಜುಲೈ 29ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಖೇವಾಲ್ಕರ್ ಅವರು ಎನ್ಸಿಪಿಯ ಶರದ್ ಪವಾರ್ ಬಣದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯಾಗಿರುವ ರೋಹಣಿ ಖಡ್ಸೆ ಅವರ ಪತಿ. ‘‘ಇದರ ಹಿಂದೆ ರಾಜಕೀಯ ಉದ್ದೇಶ ಇರಬಹುದು. ಈ ನಿಟ್ಟಿನಲ್ಲಿ ತನಿಖೆ ನಡೆಸಬೇಕು’’ ಎಂದು ಏಕನಾಥ್ ಖಡ್ಸೆ ಅವರು ಹೇಳಿದ್ದಾರೆ.
ಖರಾಡಿ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಕ್ರೈಮ್) ನಿಖಿಲ್ ಪಿಂಗ್ಳೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ಥಳದಿಂದ 2.7 ಗ್ರಾಂ ಕೊಕೇನ್ನಂತಹ ವಸ್ತು, 70 ಗ್ರಾಂ ಗಾಂಜಾದಂತಹ ವಸ್ತು, ಹುಕ್ಕಾ ಮಡಿಕೆ, ವಿವಿಧ ರುಚಿಯ ಹುಕ್ಕಾಗಳು ಹಾಗೂ ಮದ್ಯದ ಬಾಟಲಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ನಾವು ಪ್ರಾಂಜಲ್ ಖೇವಾಲ್ಕರ್, ನಿಖಿಲ್ ಪೊಪ್ಟಾನಿ, ಸಮೀರ್ ಸಯ್ಯದ್, ಶ್ರೀಪಾದ್ ಯಾದವ್, ಸಚಿನ್ ಬೊಂಬೆ, ಇಶಾ ಸಿಂಗ್ ಹಾಗೂ ಪ್ರಾಚಿ ಶರ್ಮಾ ಸೇರಿದಂತೆ 7 ಮದಿ ಆರೋಪಿಗಳನ್ನ ಎನ್ಡಿಪಿಎಸ್ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಬಂಂಧಿಸಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.







