ಮಹಾರಾಷ್ಟ್ರ: ಸಿವಿಲ್ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಲ್ಲಿ 179 ಶಿಶುಗಳು ಸಾವು
ಮಹಿಳೆಯರಲ್ಲಿ ಸಿಕಲ್ ಸೆಲ್ ರೋಗ ಲಕ್ಷಣ ; ಮೃತ ಶೇ. 70 ಶಿಶುಗಳಿಗೆ 0-28 ದಿನ ವಯಸ್ಸು

Photo: freepik.com
ಮುಂಬೈ: ಮಹಾರಾಷ್ಟ್ರದ ನಂದುರ್ಬಾರ್ ನಲ್ಲಿ ಕಳೆದ ಮೂರು ತಿಂಗಳಲ್ಲಿ 179ಕ್ಕೂ ಅಧಿಕ ಶಿಶುಗಳು ಸಾವನ್ನಪ್ಪಿವೆ ಎಂದು ವೈದ್ಯಾಧಿಕಾರಿ ಎಂ. ಸಾವನ್ ಕುಮಾರ್ ಅವರು ಶನಿವಾರ ತಿಳಿಸಿದ್ದಾರೆ.
ಶಿಶುಗಳ ಈ ದುರಂತ ಸಾವಿಗೆ ಹಲವು ಅಂಶಗಳು ಕಾರಣವಾಗಿವೆ. ಕಡಿಮೆ ತೂಕ, ಉಸಿರುಕಟ್ಟುವಿಕೆ, ಸೆಪ್ಸಿಸ್, ಶ್ವಾಸಕೋಶದ ರೋಗಗಳು ಮಕ್ಕಳ ಸಾವಿಗೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದ್ದಾರೆ. ದತ್ತಾಂಶವನ್ನು ಗಮನಿಸಿದರೆ, ನಂದುರ್ಬಾರ್ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಜುಲೈಯಲ್ಲಿ 75, ಆಗಸ್ಟಿನಲ್ಲಿ 86, ಸೆಪ್ಟಂಬರ್ 18 ಶಿಶುಗಳ ಸಾವು ಸಂಭವಿಸಿದೆ.
ಇದರಲ್ಲಿ ಶೇ. 70 ಶಿಶುಗಳು 0-28 ದಿನಗಳ ಪ್ರಾಯದವು. ಇಲ್ಲಿನ ಹಲವು ಮಹಿಳೆಯರಿಗೆ ಸಿಕಲ್ ಸೆಲ್ ರೋಗವಿದೆ. ಇದರಿಂದ ಹೆರಿಗೆಯ ಸಂದರ್ಭ ಸಮಸ್ಯೆ ಉಂಟಾಗುತ್ತಿದೆ.
ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ‘ಲಕ್ಷ-84 ದಿನಗಳು’ ಅನ್ನು ಆರಂಭಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ. ‘ಲಕ್ಷ 84 ದಿನಗಳು’ ಕಾರ್ಯಕ್ರಮ 42 ದಿನಗಳು ಪ್ರಸವಪೂರ್ವ ಹಾಗೂ 42 ದಿನಗಳು ಪ್ರಸವಾನಂತರ ಆರೈಕೆಯನ್ನು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶಿಶುಗಳ ಮರಣಕ್ಕೆ ಕಾರಣವಾದ ಮೂಲ ಸಮಸ್ಯೆಗಳನ್ನು ಪರಿಹರಿಸುವುದು, ಆರೋಗ್ಯ ಸೇವೆಯನ್ನು ಸುಧಾರಿಸುವುದು ಹಾಗೂ ಮಕ್ಕಳನ್ನು ಬದುಕುಳಿಸುವ ಉತ್ತಮ ಅವಕಾಶವಿದೆ ಎಂದು ಭರವಸೆ ನೀಡಲು ಸಕಾಲದಲ್ಲಿ ಮಧ್ಯಪ್ರವೇಶಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
‘‘ನಾವು ಪ್ರಸವ ಪೂರ್ವ ಹಾಗೂ ಪ್ರಸವ ನಂತರದ ಘಟಕಗಳಿಗೆ ಭೇಟಿ ನೀಡಲಿದ್ದೇವೆ. ತಪಾಸಣೆ ನಡೆಸಲಿದ್ದೇವೆ ಹಾಗೂ ಶಿಶುಗಳ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸಲಿದ್ದೇವೆ. ನಾವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದರ ಫಲಿತಾಂಶ ಎರಡು ಮೂರು ತಿಂಗಳಲ್ಲಿ ಕಂಡು ಬರಲಿದೆ’’ ಎಂದು ಸಾವನ್ ಕುಮಾರ್ ಹೇಳಿದ್ದಾರೆ.







