ಮಹಾರಾಷ್ಟ್ರ | ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಅತ್ಯಾಚಾರ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ

ಸತಾರ (ಮಹಾರಾಷ್ಟ್ರ): ಇಬ್ಬರು ಪೊಲೀಸರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಕೈಮೇಲೆ ಬರೆದುಕೊಂಡು ಮಹಾರಾಷ್ಟ್ರದ ಸತಾರ ಜಿಲ್ಲೆಯ ಸರಕಾರಿ ಆಸ್ಪತ್ರೆಯ ಮಹಿಳಾ ವೈದ್ಯೆಯೊಬ್ಬರು ಹೋಟೆಲ್ ನ ಕೊಠಡಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇಬ್ಬರು ಪೊಲೀಸ್ ಅಧಿಕಾರಿಗಳು ಕಳೆದ ಐದು ತಿಂಗಳಿನಿಂದ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮೃತ ವೈದ್ಯೆ ಆರೋಪಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಗೋಪಾಲ್ ಬಡಾನೆ ತನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದು, ಮತ್ತೊಬ್ಬ ಪೊಲೀಸ್ ಅಧಿಕಾರಿ ಪ್ರಶಾಂತ್ ಬಂಕರ್ ನನಗೆ ಮಾನಸಿಕ ಹಿಂಸೆ ನೀಡಿದ್ದರು ಎಂದು ವೈದ್ಯೆ ಡೆತ್ ನೋಟ್ ನಲ್ಲಿ ಆರೋಪಿಸಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಡೆತ್ ನೋಟ್ ನ ನೈಜತೆಯನ್ನು ಪರಿಶೀಲಿಸಲು ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ.
ಆರೋಪಿಗಳನ್ನು ಬಿಡುವುದಿಲ್ಲ: ಮಹಿಳಾ ಆಯೋಗದ ಮುಖ್ಯಸ್ಥೆ
ಈ ನಡುವೆ, ವೈದ್ಯೆಯ ಆತ್ಮಹತ್ಯೆಗೆ ಕಾರಣರಾಗಿರುವವರನ್ನು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಂಕರ್ ಹೇಳಿದ್ದಾರೆ. ‘‘ನಾವು ಘಟನೆಯನ್ನು ಗಣನೆಗೆ ತೆಗೆದುಕೊಂಡಿದ್ದೇವೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸತಾರಾ ಪೊಲೀಸರಿಗೆ ಆದೇಶ ನೀಡಿದ್ದೇವೆ. ಆರೋಪಿಗಳನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಲಾಗಿದೆ’’ ಎಂದು ಅವರು ತಿಳಿಸಿದರು.
‘‘ಸುಳ್ಳು ಪೋಸ್ಟ್ ಮಾರ್ಟಮ್ ವರದಿಗಳನ್ನು ಸಿದ್ಧಪಡಿಸುವಂತೆ ವೈದ್ಯೆಯ ಮೇಲೆ ಅಗಾಧ ಪೊಲೀಸ್ ಮತ್ತು ರಾಜಕೀಯ ಒತ್ತಡವಿತ್ತು. ಆ ವಿಷಯದಲ್ಲಿ ದೂರು ನೀಡಲು ಅವರು ಪ್ರಯತ್ನಿಸಿದ್ದರು. ನನ್ನ ಸಹೋದರಿಗೆ ನ್ಯಾಯ ಬೇಕು’’ ಎಂದು ಮೃತ ವೈದ್ಯೆಯ ಸೋದರ ಸಂಬಂಧಿಯೊಬ್ಬರು ಹೇಳಿದ್ದಾರೆ.
‘‘ರಕ್ಷಕರೇ ಭಕ್ಷಕರಾದರೆ ಹೇಗೆ? ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ. ಆದರೆ ಅವರೇ ಮಹಿಳಾ ವೈದ್ಯರೊಬ್ಬರನ್ನು ಶೋಷಣೆಗೊಳಪಡಿಸಿದರೆ, ನ್ಯಾಯ ಹೇಗೆ ಸಿಗುತ್ತದೆ? ಈ ವೈದ್ಯೆ ಹಿಂದೆ ದೂರು ಸಲ್ಲಿಸಿದಾಗ ಯಾಕೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ? ಮಹಾಯುತಿ ಸರಕಾರವು ಪದೇ ಪದೇ ಪೊಲೀಸರನ್ನು ರಕ್ಷಿಸುತ್ತದೆ. ಹಾಗಾಗಿಯೇ ಪೊಲೀಸರ ದೌರ್ಜನ್ಯಗಳು ಹೆಚ್ಚಾಗಿವೆ’’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದ ಸಂದೇಶವೊಂದರಲ್ಲಿ ಹೇಳಿದ್ದಾರೆ.







