ಮಹಾರಾಷ್ಟ್ರ | ಸರಕಾರಿ ಬೆಳೆ ವಿಮೆ ಯೋಜನೆಯಡಿ 3ರಿಂದ 21ರೂ. ಸ್ವೀಕರಿಸಿದ ರೈತರು : ನಮ್ಮ ವಿಡಂಬನೆ ಎಂದು ಆಕ್ರೋಶ

ಸಾಂದರ್ಭಿಕ ಚಿತ್ರ | Photo Credit : PTI
ಮುಂಬೈ: ಭಾರಿ ಮಳೆಯಿಂದ ಬೆಳೆ ಹಾನಿಗೀಡಾಗಿದ್ದ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ರೈತರು 3 ರೂ.ನಿಂದ 21ರೂ.ವರೆಗೆ ಬೆಳೆ ಪರಿಹಾರ ಸ್ವೀಕರಿಸಿರುವ ಘಟನೆ ವರದಿಯಾಗಿದ್ದು, ಸರಕಾರದ ಈ ಪರಿಹಾರ ಧನ ನಮ್ಮ ನೋವಿಗೆ ಮಾಡಿರುವ ಅವಮಾನ ಮತ್ತು ವಿಡಂಬನೆಯಾಗಿದೆ ಎಂದು ಸಂತ್ರಸ್ತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ದೀಪಾವಳಿಗೂ ಮುನ್ನ ತಾವು ಸ್ವೀಕರಿಸಿದ ಬಿಡಿಗಾಸಿನ ನೆರವನ್ನು ಗುರುವಾರ ಚೆಕ್ ಮೂಲಕ ಜಿಲ್ಲಾಧಿಕಾರಿಗೆ ಮರಳಿಸಿದ ಸಂತ್ರಸ್ತ ರೈತರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದರು. “ಇದು ಪರಿಹಾರವಲ್ಲ; ರೈತರ ವಿಡಂಬನೆಯಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಕೋಲಾ ಜಿಲ್ಲೆಯಾದ್ಯಂತ ಸೋಯಾಬೀನ್, ಹತ್ತಿ ಹಾಗೂ ಹೆಸರು ಕಾಳು ಬೆಳೆಗಳು ತೀವ್ರ ಹಾನಿಗೀಡಾಗಿದ್ದವು. ಇದರ ಬೆನ್ನಿಗೇ, ದೀಪಾವಳಿಯೊಳಗೆ ಸಂತ್ರಸ್ತ ರೈತರಿಗೆ ಪರಿಹಾರ ಧನ ವಿತರಿಸಲಾಗುವುದು ಎಂದು ರಾಜ್ಯ ಸರಕಾರ ಭರವಸೆ ನೀಡಿತ್ತು.
ನಮ್ಮ ಭೂದಾಖಲೆಗಳು, ಆಧಾರ್ ಹಾಗೂ ಬ್ಯಾಂಕ್ ಖಾತೆ ವಿವರಗಳು ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಪರಿಹಾರ ವಿತರಣೆಯ ವಿಲೇವಾರಿ ಮಾಡಲು ಕಂದಾಯ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಆದರೆ, ಸರಕಾರದ ಬಳಿ ಸಾಕಷ್ಟು ಸಂಪನ್ಮೂಲವಿದ್ದರೂ, ನೈಜ ಪರಿಹಾರ ವರ್ಗಾವಣೆ ಪ್ರಕ್ರಿಯೆ ವಿಳಂಬಗೊಂಡಿತು ಎಂದು ಸಂತ್ರಸ್ತ ರೈತರು ಆರೋಪಿಸಿದ್ದಾರೆ. ಪರಿಹಾರ ಅರ್ಜಿ ಸ್ವೀಕಾರ ಪ್ರಕ್ರಿಯೆಯ ಔಪಚಾರಿಕತೆಯನ್ನು ಮುಕ್ತಾಯಗೊಳಿಸುವಲ್ಲಿ ಕೆಲವು ಸ್ಥಳೀಯ ಕಂದಾಯ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕೆಲ ರೈತರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಯುವ ಕಾಂಗ್ರೆಸ್ ವಕ್ತಾರ ಕಪಿಲ್ ಧೋಕೆ, “ನಿಮಗೆ ರೈತರನ್ನು ಗೌರವಿಸಲು ಸಾಧ್ಯವಿಲ್ಲದಿದ್ದರೆ, ಕನಿಷ್ಠ ಪಕ್ಷ ಅವರನ್ನು ಅವಮಾನಿಸಬೇಡಿ. ಇದು ನೆರವಲ್ಲ; ವಿಡಂಬನೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.







