Maharashtra | ಸ್ವಯಂಘೋಷಿತ ‘ದೇವಮಾನವ’ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ (AI)
ಮುಂಬೈ: ತಾನು ಶಿವನ ಅವತಾರ ಎಂದು ಹೇಳಿಕೊಂಡು 35 ವರ್ಷ ಪ್ರಾಯದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಸ್ವಯಂಘೋಷಿತ ‘ದೇವಮಾನವ’ನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೋರ್ವರು ಶುಕ್ರವಾರ ತಿಳಿಸಿದರು.
ಇತ್ತೀಚಿಗೆ ನಾಸಿಕ್ನಲ್ಲಿ ಮಾಜಿ ಮರ್ಚಂಟ್ ನೇವಿ ಅಧಿಕಾರಿಯೂ ಆಗಿರುವ ಸ್ವಯಂಘೋಷಿತ ‘ದೇವಮಾನವ’ ಅಶೋಕ್ ಖರಾತ್ ಬಂಧನವು ಪಾಲ್ಘರ್ ಜಿಲ್ಲೆಯ ‘ದೇವಮಾನವ’ನ ವಿರುದ್ಧ ದೂರು ದಾಖಲಿಸಲು ಮಹಿಳೆಗೆ ಧೈರ್ಯ ನೀಡಿತ್ತು ಎಂದರು.
ಪುಣೆ ನಿವಾಸಿಯಾಗಿರುವ ಮಹಿಳೆಗೆ 2023ರಲ್ಲಿ ಫೇಸ್ಬುಕ್ ಮೂಲಕ ಮೊದಲ ಬಾರಿಗೆ 40ರ ಹರೆಯದ ಆರೋಪಿಯೊಂದಿಗೆ ಸಂಪರ್ಕವುಂಟಾಗಿತ್ತು. ಅದೇ ವರ್ಷದ ಡಿಸೆಂಬರ್ನಲ್ಲಿ ಆರೋಪಿಯು ಪುಣೆಗೆ ತೆರಳಿ ಮಹಿಳೆಯನ್ನು ಭೇಟಿಯಾಗಿದ್ದ. ತಾನು ಮಹಾದೇವನ ಅವತಾರ ಮತ್ತು ಮಹಿಳೆ ತನ್ನ ‘ಪಾರ್ವತಿ’ ಎಂದು ಹೇಳಿಕೊಂಡು ಆಕೆಯನ್ನು ವಂಚಿಸಿದ್ದ ಎನ್ನಲಾಗಿದೆ ಎಂದೂ ಅಧಿಕಾರಿ ಎಫ್ಐಆರ್ ಅನ್ನು ಉಲ್ಲೇಖಿಸಿ ತಿಳಿಸಿದರು.
ಆರೋಪಿಯು ತನ್ನನ್ನು ಪುಣೆಯ ಮಂಜರಿ ಪ್ರದೇಶದ ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರಕ್ಕೆ ಮುನ್ನ ತನಗೆ ನಿಶ್ಚೇತನಗೊಳಿಸುವ ಪದಾರ್ಥವನ್ನು ನೀಡಿದ್ದ. ಲೈಂಗಿಕ ದೌರ್ಜನ್ಯದ ವೇಳೆ ಆರೋಪಿಯು ತನಗೆ ಅರಿವಿಲ್ಲದೆ ತನ್ನ ಛಾಯಾಚಿತ್ರಗಳನ್ನು ತೆಗೆದಿದ್ದ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.
ಪಾಲ್ಘರ್ ಜಿಲ್ಲೆಯಲ್ಲಿ ಸಾಮಾಜಿಕ ಸಂಘಟನೆಯೊಂದನ್ನು ನಡೆಸುತ್ತಿರುವ ಆರೋಪಿಯು ತನ್ನನ್ನು ಬ್ಲ್ಯಾಕ್ಮೇಲ್ ಮಾಡಲು ಈ ಚಿತ್ರಗಳನ್ನು ಬಳಸಿದ್ದ. ಕಳೆದ ವರ್ಷದ ಮೇ ತಿಂಗಳಿನಲ್ಲಿ ವಸಯಿಯ ಹೋಟೆಲ್ವೊಂದಕ್ಕೆ ತನ್ನನ್ನು ಕರೆಸಿಕೊಂಡು ಮತ್ತೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದ ಎಂದೂ ಮಹಿಳೆ ಪೋಲಿಸರಿಗೆ ತಿಳಿಸಿದ್ದಾರೆ.
ಪ್ರಾಥಮಿಕ ಅಪರಾಧವು ಪುಣೆಯಲ್ಲಿ ನಡೆದಿತ್ತು ಎನ್ನಲಾಗಿದ್ದು, ‘ಝೀರೊ ಎಫ್ಐಆರ್’ ದಾಖಲಿಸಿಕೊಂಡ ಮಾಣಿಕ್ಪುರ ಪೋಲೀಸರು ಅದನ್ನು ಮುಂದಿನ ತನಿಖೆಗಾಗಿ ಪುಣೆಯ ಹಡಪಸರ್ ಪೋಲಿಸ್ ಠಾಣೆಗೆ ವರ್ಗಾಯಿಸಿದ್ದಾರೆ ಎಂದು ಮಾಣಿಕ್ಪುರ ಪೋಲಿಸ್ ಠಾಣೆಯ ಸೀನಿಯರ್ ಇನ್ಸ್ಪೆಕ್ಟರ್ ಹೀರಾಲಾಲ್ ಜಾಧವ ಸುದ್ದಿಸಂಸ್ಥೆಗೆ ತಿಳಿಸಿದರು.
ಝೀರೊ ಎಫ್ಐಆರ್ ಅಪರಾಧವು ಎಲ್ಲಿಯೇ ನಡೆದಿದ್ದರೂ ಭಾರತದ ಯಾವುದೇ ಪೋಲಿಸ್ ಠಾಣೆಯಲ್ಲಿ ಸಲ್ಲಿಸಬಹುದಾದ ಪ್ರಥಮ ಮಾಹಿತಿ ವರದಿಯಾಗಿದೆ.
ಆರೋಪಿಯು ಇದೇ ವಿಧಾನವನ್ನು ಬಳಸಿಕೊಂಡು ಹಲವಾರು ಇತರ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಆರೋಪಿಯ ಬಂಧನಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.






