Maharashtra | ವನ್ಯಜೀವಿ ಅನುಮತಿಯಿಲ್ಲದ ಅದಾನಿಯ ತರಾಲಿ ಯೋಜನೆಗೆ ಅರಣ್ಯ ಇಲಾಖೆ ಬ್ರೇಕ್

Photo Credit : IndianExpress
ಮುಂಬೈ: ಮಹಾರಾಷ್ಟ್ರ ಅರಣ್ಯ ಇಲಾಖೆಯು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ನ 1,500 ಮೆಗಾವ್ಯಾಟ್ ಸಾಮರ್ಥ್ಯದ ತರಾಲಿ ಪಂಪ್ಡ್ ಸ್ಟೋರೇಜ್ ಯೋಜನೆಯ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶಿಸಿದೆ.
ಸತಾರಾ ಜಿಲ್ಲೆಯ ಈ ಯೋಜನಾ ಸ್ಥಳವು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿದ್ದರೂ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್ಬಿಡಬ್ಲ್ಯೂಎಲ್) ಕಡ್ಡಾಯ ಪೂರ್ವಾನುಮತಿಯಿಲ್ಲದೆ ಕಾಮಗಾರಿಗೆ ಅವಕಾಶ ನೀಡಿರುವುದನ್ನು ನೋಟಿಸ್ನಲ್ಲಿ ಪ್ರಶ್ನಿಸಲಾಗಿದೆ.
ಸತಾರಾ ಅರಣ್ಯ ಆಡಳಿತವು ನ.13ರಂದು ಕಾಮಗಾರಿ ಸ್ಥಗಿತಗೊಳಿಸುವಂತೆ ನೋಟಿಸ್ ಜಾರಿಗೊಳಿಸಿದೆ. ಯೋಜನೆಯ ಅಂದಾಜು ವೆಚ್ಚವನ್ನು 5,675 ಕೋಟಿ ರೂ.ಗಳಿಂದ 56.75 ಕೋಟಿ ರೂ.ಗೆ ಇಳಿಸಲು ರಾಜ್ಯ ಅರಣ್ಯ ಇಲಾಖೆಯು ಅನುಮತಿ ನೀಡಿರುವ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಕಾಮಗಾರಿ ಸ್ಥಗಿತದ ಆದೇಶ ಹೊರಬಿದ್ದಿದೆ. ಈ ವೆಚ್ಚ ಕಡಿತದಿಂದಾಗಿ ವನ್ಯಜೀವಿ ಸಂರಕ್ಷಣಾ ಕೊಡುಗೆಯು ಸಹ 227 ಕೋಟಿ ರೂ.ಗಳಿಂದ ಸುಮಾರು 2.27 ಕೋಟಿ ರೂ.ಗೆ ತಗ್ಗಿದೆ.
ಎನ್ಬಿಡಬ್ಲ್ಯೂಎಲ್ ಪೂರ್ವಾನುಮತಿಯಿಲ್ಲದೆ ಕಾಮಗಾರಿ ಆರಂಭಿಸಿರುವುದು ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳ ಸ್ಪಷ್ಟ ಉಲ್ಲಂಘನೆ ಎಂದು ಬಣ್ಣಿಸಿರುವ ಇಲಾಖೆಯು, ಯಾರ ಅಧಿಕಾರದ ಮೇರೆಗೆ ಅನುಮತಿಯಿಲ್ಲದೆ ಕಾಮಗಾರಿ ಆರಂಭಿಸಲಾಗಿದೆ ಎನ್ನುವುದಕ್ಕೆ ಮೂರು ದಿನಗಳಲ್ಲಿ ಲಿಖಿತ ವಿವರಣೆ ನೀಡುವಂತೆ ಕಂಪೆನಿಗೆ ಸೂಚಿಸಿದೆ. ಅಲ್ಲದೆ ಶಾಸನಬದ್ಧ ಅನುಮತಿ ದಾಖಲೆಗಳು, ನಕ್ಷೆಗಳು ಮತ್ತು ಮರ ಕಡಿಯುವ ಅನುಮತಿಗಳನ್ನು ಒದಗಿಸುವಂತೆ ಸೂಚಿಸಿದೆ. ತೃಪ್ತಿಕರ ಉತ್ತರ ನೀಡದಿದ್ದರೆ ಕಾನೂನು ಮತ್ತು ದಂಡನಾತ್ಮಕ ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ. ಶ್ರೀನಿವಾಸ ರೆಡ್ಡಿ ಅವರು ಮಾರ್ಚ್ 2026ರಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ 227 ಕೋಟಿ ರೂ.ಜಮಾ ಮಾಡುವಂತೆ ಕಂಪೆನಿಗೆ ಸೂಚಿಸಿದ್ದರು. ಆದರೆ ಸೆ.8ರಂದು ಕಂಪೆನಿಯು ವೆಚ್ಚವನ್ನು 56.75 ಕೋಟಿ ರೂ.ಗೆ ಪರಿಷ್ಕರಿಸಲು ಕೋರಿ ಅಫಿಡವಿಟ್ ಸಲ್ಲಿಸಿದ್ದು, ಅ.12ರಂದು ಅದನ್ನು ಅಂಗೀಕರಿಸಲಾಗಿತ್ತು. ಇದರ ಬೆನ್ನಲ್ಲೇ ಕಂಪೆನಿಯು ಪರಿಷ್ಕೃತ ವೆಚ್ಚದ ಶೇ.1ರಷ್ಟನ್ನು (56.75 ಲಕ್ಷ ರೂ.) ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಖಾತೆಗೆ ಜಮಾ ಮಾಡಿತ್ತು. ಆದರೆ ಈ ವೆಚ್ಚದ ಪರಿಷ್ಕರಣೆಗೆ ಒಪ್ಪಿಗೆ ನೀಡುವುದು ಎನ್ಬಿಡಬ್ಲ್ಯೂಎಲ್ ವನ್ಯಜೀವಿ ಅನುಮತಿಗೆ ಸಮನಾಗಿರುವುದಿಲ್ಲ; ಆ ಅನುಮತಿಯು ಇನ್ನೂ ಬಾಕಿ ಉಳಿದಿದೆ.
ಸತಾರಾ ಜಿಲ್ಲೆಯ ಗೌರವ ವನ್ಯಜೀವಿ ವಾರ್ಡನ್ ರೋಹನ್ ಭಾಟೆ ಅವರು ಅ.30ರಂದು ದೂರು ಸಲ್ಲಿಸಿದ ಬಳಿಕ ಈ ವೆಚ್ಚ ಕಡಿತವು ತೀವ್ರ ಚರ್ಚೆಗೆ ಗ್ರಾಸವಾಯಿತು. ನ.6ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈ ಬಗ್ಗೆ ತುರ್ತು ತನಿಖೆ ನಡೆಸುವಂತೆ ರಾಜ್ಯ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ. ಸತಾರಾ ಜಿಲ್ಲೆಯ ಪಾಟನ್ ತಾಲೂಕಿನ ನಿವಾಡೆ, ತೊಂಡೋಶಿ, ಕಲಂಬೆ ಮತ್ತು ಜಲು ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 150.74 ಹೆಕ್ಟೇರ್ ಅರಣ್ಯೇತರ ಭೂಮಿಯಲ್ಲಿ ಈ ಬೃಹತ್ ಯೋಜನೆ ಪ್ರಸ್ತಾವಿತವಾಗಿದೆ.






