ಎಸ್ಸಿ/ಎಸ್ಟಿ ನಿಧಿಯನ್ನು ʼಲಾಡ್ಕಿ ಬಹಿಣʼ ಯೋಜನೆಗೆ ಬಳಸಲು ಮುಂದಾದ ಮಹಾರಾಷ್ಟ್ರ ಸರಕಾರ

PC :ladkibahiniyojana.com
ಮುಂಬೈ: ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಮಹಾರಾಷ್ಟ್ರ ಸರಕಾರವು ಬಜೆಟ್ನಲ್ಲಿ ಪರಿಶಿಷ್ಟ ಜಾತಿಗಳು(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ಗಳಿಗೆ ಮೀಸಲಿರಿಸಿದ್ದ ರೂ. 746 ಕೋಟಿಗಳನ್ನು ಮಹಿಳೆಯರಿಗಾಗಿ ತನ್ನ ಪ್ರಮುಖ ಕಾರ್ಯಕ್ರಮವಾಗಿರುವ ʼಮಾಝ್ಹಿ ಲಾಡ್ಕಿ ಬಹಿಣʼ ಯೋಜನೆಗೆ ಬಳಸಲು ನಿರ್ಧರಿಸಿದೆ ಎಂದು ಶುಕ್ರವಾರ ಹೊರಡಿಸಲಾಗಿರುವ ಸರಕಾರಿ ನಿರ್ಣಯವು ತಿಳಿಸಿದೆ. ಮಹಾರಾಷ್ಟ್ರ ಸರಕಾರವು ಎದುರಿಸುತ್ತಿರುವ ಆರ್ಥಿಕ ಒತ್ತಡದ ಇನ್ನೊಂದು ಸೂಚಕವಾಗಿರುವ ಈ ನಿರ್ಧಾರವು ಕೇಂದ್ರ ಹಣಕಾಸು ಆಯೋಗದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರಿ ನಿರ್ಣಯದಂತೆ ಸಾಮಾಜಿಕ ನ್ಯಾಯ ಇಲಾಖೆಯಿಂದ ಯೋಜನಾ ವೆಚ್ಚಕ್ಕಾಗಿ ಹಂಚಿಕೆಯಾಗಿದ್ದ 3,960 ಕೋಟಿ ರೂ.ಗಳ ಪೈಕಿ 410.30 ಕೋಟಿ ರೂ.ಗಳನ್ನು ಹಾಗೂ ಬುಡಕಟ್ಟು ಅಭಿವೃದ್ಧಿ ಇಲಾಖೆಗೆ ಹಂಚಿಕೆಯಾಗಿದ್ದ 3,240 ಕೋಟಿ ರೂ.ಗಳ ಪೈಕಿ 335.70 ಕೋಟಿ ರೂ.ಗಳನ್ನು ಲಾಡ್ಕಿ ಬಹಿಣ ಯೋಜನೆಗೆ ಬಳಸಿಕೊಳ್ಳಲು ಸರಕಾರವು ಅನುಮತಿ ನೀಡಿದೆ. ಹೀಗೆ ತಿರುಗಿಸಲಾದ ಹಣವನ್ನು ಎಸ್ಸಿ ಮತ್ತು ಎಸ್ಟಿ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಸೇರಿದ ʼಲಾಡ್ಕಿ ಬಹಿಣʼ ಯೋಜನೆಯ ಫಲಾನುಭವಿಗಳಿಗೆ ವಿತರಿಸಲು ಬಳಸಿಕೊಳ್ಳಲಾಗುವುದು ಎಂದು ಸರಕಾರಿ ನಿರ್ಣಯವು ತಿಳಿಸಿದೆ.
ಈ ನಿರ್ಧಾರದ ಕಾನೂನು ಬದ್ಧತೆಯ ಕುರಿತು ರಾಜ್ಯ ಸರಕಾರದ ಅಧಿಕಾರಿಗಳು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.
ಯೋಜನಾ ಆಯೋಗದ ಮಾರ್ಗಸೂಚಿಗಳು ಇಂತಹ ಬದಲಾವಣೆಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ಹಂಚಿಕೆಯಾದ ಹಣವನ್ನು ಎಸ್ಸಿ/ಎಸ್ಟಿಗಳಿಗೆ ಮಾತ್ರ ಬಳಸಬೇಕು ಎಂದು ಹೇಳಿದ ಸಾಮಾಜಿಕ ನ್ಯಾಯ ಇಲಾಖೆಯ ಅಧಿಕಾರಿಯೋರ್ವರು, ಒಡಿಶಾ, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ಕೆಲವು ರಾಜ್ಯಗಳು ಎಸ್ಸಿ/ಎಸ್ಟಿಗಳಿಗೆ ಮೀಸಲಾದ ಹಣವನ್ನು ಅನ್ಯ ಉದ್ದೇಶಗಳಿಗೆ ವರ್ಗಾಯಿಸಲಾಗದಂತೆ ಮತ್ತು ರದ್ದುಗೊಳಿಸಲಾಗದಂತೆ ಕಾನೂನುಗಳನ್ನು ತಂದಿವೆ. ಅಂದರೆ ಈ ವರ್ಗಗಳಿಗೆ ಹಂಚಿಕೆಯಾದ ಸಂಪೂರ್ಣ ಮೊತ್ತವನ್ನು ಹಣಕಾಸು ವರ್ಷದಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಮಹಾರಾಷ್ಟ್ರ ಸರಕಾರವೂ ಇಂತಹುದೇ ಕಾನೂನನ್ನು ತರಲು ಯೋಜಿಸಿತ್ತು,ಆದರೆ ನಿರ್ದಿಷ್ಟ ವರ್ಗದ ರಾಜಕೀಯ ನಾಯಕರು ಅದನ್ನು ವಿರೋಧಿಸಿದ್ದರು ಎಂದರು.
ಮತ್ತೊಂದೆಡೆ ರಾಜ್ಯ ಹಣಕಾಸು ಇಲಾಖೆಯ ಅಧಿಕಾರಿಯೋರ್ವರು, ತಾಂತ್ರಿಕವಾಗಿ ಸರಕಾರದ ಆದೇಶದಲ್ಲಿ ಯಾವುದೇ ತಪ್ಪು ಇಲ್ಲ ಎಂದು ಒತ್ತಿ ಹೇಳಿದರು.
ಲಾಡ್ಕಿ ಬಹಿಣ ಯೋಜನೆಗಾಗಿ ಈ ಎರಡು ಇಲಾಖೆಗಳಿಂದ ಬಳಸಲಾಗುವ ಹಣವನ್ನು ಎಸ್ಸಿ/ಎಸ್ಟಿ ವರ್ಗಗಳ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಸರಕಾರಿ ನಿರ್ಣಯದಲ್ಲಿ ಹೇಳಲಾಗಿದೆ. ಈ ಹಿಂದೆಯೂ ಎಸ್ಸಿ/ಎಸ್ಟಿಗಳಿಗೆ ಮೀಸಲಾಗಿದ್ದ ಹಣವನ್ನು ಇತರ ಇಲಾಖೆಗಳ ಯೋಜನೆಗಳಿಗಾಗಿ ಹಂಚಿಕೆ ಮಾಡಲಾಗಿತ್ತು. ಉದಾಹರಣೆಗೆ ಎಸ್ಸಿ/ಎಸ್ಟಿ ನಿಧಿಗಳನ್ನು ಸಂಜಯ ಗಾಂಧಿ ನಿರಾಧಾರ ಯೋಜನೆ ಮತ್ತು ಶ್ರವಣ ಬಾಲ ನಿವೃತ್ತಿ ವೇತನ ಯೋಜನಾದಂತಹ ಪಿಂಚಣಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಲಾಡ್ಕಿ ಬಹಿಣ ಯೋಜನೆಯಡಿ 2.46 ಕೋ.ನೋಂದಾಯಿತ ಫಲಾನುಭವಿಗಳಿದ್ದು,ದುರ್ಬಲ ಮಹಿಳೆಯರಿಗೆ 1,500 ರೂ.ಗಳ ಮಾಸಿಕ ಭತ್ಯೆಯನ್ನು ಯೋಜನೆಯು ಒದಗಿಸುತ್ತದೆ. ಮಹಾರಾಷ್ಟ್ರ ಸರಕಾರವು ಪ್ರತಿ ತಿಂಗಳು ಫಲಾನುಭವಿಗಳಿಗೆ ವಿತರಣೆಗಾಗಿ 3,800 ಕೋಟಿ ರೂ.ಗಳನ್ನು ಹಂಚಿಕೆ ಮಾಡುತ್ತಿದೆ.
2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಭರ್ಜರಿ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಲಾಡ್ಕಿ ಬಹಿಣ ಯೋಜನೆಯೂ ಒಂದಾಗಿತ್ತು. ಆದಾಗ್ಯೂ 2025-26ನೇ ವಿತ್ತವರ್ಷದಲ್ಲಿ 45,892 ಕೋಟಿ ರೂ.ಗಳ ಅಂದಾಜು ಆದಾಯ ಕೊರತೆಯೊಂದಿಗೆ ಮಹಾಯುತಿ ಸರಕಾರಕ್ಕೆ ಈಗ ವಿಧಾನಸಭಾ ಚುನಾವಣೆಗೆ ಮುನ್ನ ತಾನು ಪ್ರಕಟಿಸಿದ್ದ ವಿವಿಧ ಜನಪ್ರಿಯ ಯೋಜನೆಗಳಿಗೆ ಬಜೆಟ್ ಹಂಚಿಕೆ ಮಾಡುವುದು ಕಠಿಣವಾಗಿ ಪರಿಣಮಿಸಿದೆ.







