Maharashtra| ಮಾಲೇಗಾಂವ್ನಲ್ಲಿ ʼಇಸ್ಲಾಂ ಪಕ್ಷʼಕ್ಕೆ ಮೇಯರ್ ಪಟ್ಟ ಸಾಧ್ಯತೆ

Credit: Facebook/Asif Shaikh Rasheed
ಮುಂಬೈ: ಮಹಾರಾಷ್ಟ್ರದಾದ್ಯಂತ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಅಲೆ ಅಪ್ಪಳಿಸಿದ್ದರೂ, ಮುಸ್ಲಿಂ ಬಾಹುಳ್ಯದ ನಾಶಿಕ್ ಜಿಲ್ಲೆಯ ಮಾಲೇಗಾಂವ್ ನಗರ ಪಾಲಿಕೆಯಲ್ಲಿ ಇಸ್ಲಾಂ ಪಕ್ಷ ಎಂದೇ ಜನಪ್ರಿಯವಾಗಿರುವ ಇಂಡಿಯನ್ ಸೆಕ್ಯುಲರ್ ಲಾರ್ಜೆಸ್ಟ್ ಅಸೆಂಬ್ಲಿ ಆಫ್ ಮಹಾರಾಷ್ಟ್ರ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇಸ್ಲಾಂ ಪಕ್ಷದ ಅಭ್ಯರ್ಥಿಯು ಮೇಯರ್ ಆಗುವ ಸಾಧ್ಯತೆ ಇದೆ ಎಂದು deccanherald.com ವರದಿ ಮಾಡಿದೆ.
84 ಸದಸ್ಯ ಬಲದ ಮಾಲೇಗಾಂವ್ ನಗರ ಪಾಲಿಕೆಯಲ್ಲಿ ಇಸ್ಲಾಂ ಪಕ್ಷದ 35 ಕಾರ್ಪೊರೇಟರ್ ಗಳು ಚುನಾಯಿತರಾಗಿದ್ದು, ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಪಕ್ಷ 21 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 18, ಸಮಾಜವಾದಿ ಪಕ್ಷ 5, ಕಾಂಗ್ರೆಸ್ 3 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಕೇವಲ ಎರಡು ವಾರ್ಡ್ ಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ಲಾಂ ಪಕ್ಷದ ಮುಖ್ಯಸ್ಥ ಶೇಖ್ ಆಸಿಫ್ ಶೇಖ್ ರಶೀದ್, “ಇದು ಸಂಪ್ರದಾಯ ಮತ್ತು ಜನರು ನೀಡಿರುವ ತೀರ್ಪಿನ ವಿಷಯವಾಗಿದೆ. ನಗರದ ಜನತೆ ನಮಗೆ ದೊಡ್ಡ ಜನಮತವನ್ನು ನೀಡಿದ್ದಾರೆ. ನಾವು 15 ಸ್ಥಾನಗಳಿಂದ ಮುಂದಿದ್ದು, ಜಾತ್ಯತೀತ ರಂಗಕ್ಕಿಂತ 20 ಸ್ಥಾನಗಳಲ್ಲಿ ಮುಂದಿದ್ದೇವೆ” ಎಂದು ಹೇಳಿದ್ದಾರೆ.
“ನಾವು ಅತಿ ದೊಡ್ಡ ಪಕ್ಷವಾಗಿರುವುದರಿಂದ, ನಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ಬೇಕು ಎಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ. ಆದರೆ, ನಗರದ ಅಭಿವೃದ್ಧಿ, ಪ್ರಗತಿ ಹಾಗೂ ಏಕತೆಗಾಗಿ ಅಗತ್ಯ ಬಿದ್ದರೆ, ಒಟ್ಟಾಗಿ ಕುಳಿತು ಸಂಧಾನ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಮಾತುಕತೆಗೆ ಬಾಗಿಲು ತೆರೆದಿದ್ದು, ಸಮಾನ ಮನಸ್ಕ ಪಕ್ಷಗಳು ಹಾಗೂ ಜನರು ನಮ್ಮ ಮೇಯರ್ ಆಕಾಂಕ್ಷೆಯನ್ನು ಬೆಂಬಲಿಸುತ್ತಾರೆ ಎಂದು ಭಾವಿಸಿದ್ದೇನೆ" ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.







