Maharashtra | 400 ಕೋಟಿ ರೂ.ಗೂ ಅಧಿಕ ವೇತನ ಬಾಕಿ: ಸಿನ್ಹಗಢ್ ನ 44 ಶಿಕ್ಷಣ ಸಂಸ್ಥೆಗಳ ವಿರುದ್ಧ CBI, ED ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ

ಬಾಂಬೆ ಹೈಕೋರ್ಟ್ | Photo Credit : PTI
ಮುಂಬೈ: 400 ಕೋಟಿ ರೂ.ಗೂ ಅಧಿಕ ಮೊತ್ತದ ವೇತನ ಬಾಕಿ ಇರಿಸಿಕೊಂಡಿರುವುದು ಹಾಗೂ ಉದ್ಯೋಗಿಗಳಿಗೆ ನಿವೃತ್ತಿ ಸೌಲಭ್ಯಗಳನ್ನು ಪಾವತಿಸದ ಆರೋಪ ಎದುರಿಸುತ್ತಿರುವ ಪುಣೆ ಮೂಲದ ಸಿನ್ಹಗಢ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿ (STES) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 44 ಶಿಕ್ಷಣ ಸಂಸ್ಥೆಗಳ ಹಣಕಾಸು ವ್ಯವಹಾರಗಳ ಕುರಿತು CBI ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ನ. 19, 2026ರೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಎರಡೂ ತನಿಖಾ ಸಂಸ್ಥೆಗಳಿಗೆ ನ್ಯಾಯಪೀಠ ಸೂಚಿಸಿದೆ.
ಕಳೆದ ಎಂಟು ವರ್ಷಗಳಿಂದ ವೇತನ ಹಾಗೂ ನಿವೃತ್ತಿ ಸೌಲಭ್ಯಗಳು ಪಾವತಿಯಾಗದ ಹಿನ್ನೆಲೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿ.ಎಸ್. ಕುಲಕರ್ಣಿ ಹಾಗೂ ನ್ಯಾ. ಅದ್ವೈತ್ ಎಂ. ಸೆತ್ನಾ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಸುಮಾರು ಎಂಟು ವರ್ಷಗಳಿಂದ ವೇತನ ಮತ್ತು ನಿವೃತ್ತಿ ಸೌಲಭ್ಯಗಳು ಪಾವತಿಯಾಗದ ಕಾರಣ 13 ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಹಲವರು ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯಂತಹ ಮೂಲಭೂತ ಅಗತ್ಯಗಳ ವೆಚ್ಚವನ್ನೂ ಭರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಸಿನ್ಹಗಢ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿಯಲ್ಲಿ ಭಾರಿ ಪ್ರಮಾಣದ ಹಣಕಾಸು ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಉದ್ಯೋಗಿಗಳ ವೇತನದಿಂದ ಕಡಿತಗೊಳಿಸಿದ ಹಣವನ್ನು ಅಕ್ರಮ ಹಣ ವರ್ಗಾವಣೆಯ ಮೂಲಕ ಬೇರೆಡೆಗೆ ವರ್ಗಾಯಿಸಲಾಗಿದೆ ಎಂಬುದಾಗಿಯೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಈಗಲೂ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳುತ್ತಿರುವ 44 ಶಿಕ್ಷಣ ಸಂಸ್ಥೆಗಳು ಇಷ್ಟು ದೀರ್ಘಕಾಲ ಉದ್ಯೋಗಿಗಳಿಗೆ ವೇತನ ಪಾವತಿಸಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯ ಆಘಾತ ವ್ಯಕ್ತಪಡಿಸಿದೆ. ಶಿಕ್ಷಣ ಸಂಸ್ಥೆಗಳಿಗೆ ಮೀಸಲಿಟ್ಟ ನಿಧಿಗಳನ್ನು ಇತರ ವ್ಯವಹಾರಗಳಿಗೆ ವರ್ಗಾಯಿಸಿರಬಹುದು ಅಥವಾ ದೇಶದ ಹೊರಗೆ ಸ್ಥಳಾಂತರಿಸಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದೂ ನ್ಯಾಯಪೀಠ ಹೇಳಿದೆ.
ಬಾಕಿ ವೇತನ ಹಾಗೂ ನಿಗದಿತ ಅವಧಿಯಲ್ಲಿ ಪಾವತಿಸಬೇಕಿದ್ದ ಇತರ ಸೌಲಭ್ಯಗಳನ್ನು ಒದಗಿಸಲು 60.65 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಸಿನ್ಹಗಢ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿಯ ವ್ಯವಸ್ಥಾಪಕ ಟ್ರಸ್ಟಿ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದ್ದರು. ಆದರೆ, ತನ್ನ ಬದ್ಧತೆಯನ್ನು ಈಡೇರಿಸುವಲ್ಲಿ ಸೊಸೈಟಿ ವಿಫಲವಾಗಿದ್ದು, ಯಾವುದೇ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತಕ್ಷಣ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಈ ನಡುವೆ, ಭಾರಿ ಪ್ರಮಾಣದ ಹಣಕಾಸು ದುರುಪಯೋಗ, ಹೆಚ್ಚುತ್ತಿರುವ ಸಾಲದ ಹೊರೆ, ನಿಧಿಗಳ ವರ್ಗಾವಣೆ ಹಾಗೂ ದೀರ್ಘಕಾಲದಿಂದ ವೇತನ ಪಾವತಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರಕಾರ, ಸಿನ್ಹಗಢ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿಯ 32 ಶಿಕ್ಷಣ ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯಕ್ಕೆ ಸೂಚಿಸಿದೆ. ಈ ಸಂಸ್ಥೆಗಳ ಮೇಲ್ವಿಚಾರಣೆಗಾಗಿ ಇಬ್ಬರು ಆಡಳಿತಾಧಿಕಾರಿಗಳನ್ನೂ ಸರಕಾರ ನೇಮಿಸಿದೆ.






