ಮಹಾರಾಷ್ಟ್ರ | ಚುನಾವಣಾ ಫಲಿತಾಂಶ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೊರೆ ಹೋದ ಐವರು INDIA ಮೈತ್ರಿಕೂಟದ ಅಭ್ಯರ್ಥಿಗಳು

Photo | PTI
ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಮಹಾಯುತಿ ಅಭ್ಯರ್ಥಿಗಳ ಗೆಲುವನ್ನು ಪ್ರಶ್ನಿಸಿ INDIA ಮೈತ್ರಿ ಪಕ್ಷದ ಐವರು ಅಭ್ಯರ್ಥಿಗಳು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
INDIA ಮೈತ್ರಿ ಪಕ್ಷದ ಅಭ್ಯರ್ಥಿಗಳಾದ ಮನೋಹರ್ ಕೃಷ್ಣ ಮಾಧವಿ, ಪ್ರಶಾಂತ್ ಸುದಮ್ ಜಗತಾಪ್, ಮಹೇಶ್ ಕೋಠೆ, ನರೇಶ್ ರತನ್ ಮನೆರಾ ಮತ್ತು ಸುನೀಲ್ ಚಂದ್ರಕಾಂತ್ ಭೂಸಾರ ಅವರು ನ್ಯಾಯಾಲಯವನ್ನು ಸಂಪರ್ಕಿಸಿದ್ದು, ತಾವು ಸ್ಪರ್ಧಿಸಿದ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ರದ್ದುಪಡಿಸುವಂತೆ ಕೋರಿದ್ದಾರೆ.
ಚುನಾವಣೆಯಲ್ಲಿ ನಕಲಿ ಮತದಾನಕ್ಕೆ ಅವಕಾಶ ನೀಡಲಾಗಿದೆ, ಪ್ರತಿಸ್ಪರ್ಧಿ ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಮತ್ತು ಆಸ್ತಿ ಕುರಿತ ಮಾಹಿತಿಯನ್ನು ಮರೆಮಾಚಿದ್ದಾರೆ, ಇವಿಎಂ ಲೋಪ, ಲಂಚ ಸೇರಿದಂತೆ ಚುನಾವಣಾ ಅವ್ಯವಹಾರ ನಡೆದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಐರೋಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವಸೇನೆ ಉದ್ಧವ್ ಬಣದ ಅಭ್ಯರ್ಥಿ ಮಾಧವಿ ಅವರು ಬಿಜೆಪಿಯ ಗಣೇಶ್ ಚಂದ್ರ ನಾಯ್ಕ್ ವಿರುದ್ಧ ಸೋಲನ್ನು ಕಂಡಿದ್ದರು. ಗಣೇಶ್ ನಾಯ್ಕ್ ಮತ್ತು ಚುನಾವಣಾ ಆಯೋಗ ದುರುದ್ದೇಶಪೂರಿತವಾಗಿ ನಕಲಿ ಮತದಾನಕ್ಕೆ ಅಕಾಶ ನೀಡುವ ಮೂಲಕ ಚುನಾವಣಾ ಅವ್ಯವಹಾರ ಎಸಗಿದೆ, ಚುನಾವಣಾ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪುಣೆಯ ಹಡಪ್ಸರ್ ಕ್ಷೇತ್ರದಿಂದ ಸ್ಪರ್ಧಿಸಿರುವ ಶರದ್ ಪವಾರ್ ನೇತೃತ್ವದ ಎನ್ಸಿಪಿ ಅಭ್ಯರ್ಥಿ ಜಗತಾಪ್ ಅವರು ಅಜಿತ್ ಪವಾರ್ ಬಣಕ್ಕೆ ಸೇರಿದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚೇತನ್ ವಿಠ್ಠಲ್ ತುಪೆ ಎದುರು ಸೋಲನ್ನು ಕಂಡಿದ್ದರು. ಚೇತನ್ ವಿಠ್ಠಲ್ ತುಪೆ 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 125ಎ ಅನ್ನು ಉಲ್ಲಂಘಿಸಿ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಮತ್ತು ಆದಾಯದ ವಿವರಗಳನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸೋಲಾಪುರ ಉತ್ತರ ಕ್ಷೇತ್ರದ ಎನ್ ಸಿಪಿ (ಎಸ್ ಪಿ) ಅಭ್ಯರ್ಥಿ ಮಹೇಶ್ ಕೋಠೆ ಅವರು ಬಿಜೆಪಿಯ ವಿಜಯಕುಮಾರ್ ದೇಶಮುಖ್ ಗೆಲುವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ದೇಶಮುಖ್ ಅವರು ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಸ್ಥಿರ ಆಸ್ತಿಗಳು ಮತ್ತು ಇತರ ಆಸ್ತಿಗಳ ಕುರಿತ ಮಾಹಿತಿಯನ್ನು ಸಲ್ಲಿಸಿಲ್ಲ. ಚುನಾವಣಾಧಿಕಾರಿಯು ಅಪರಿಪೂರ್ಣ ನಾಮಪತ್ರಗಳನ್ನು ಸ್ವೀಕರಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಓವಾಲಾ-ಮಜಿವಾಡ ಕ್ಷೇತ್ರದ ಶಿವಸೇನಾ(ಉದ್ಧವ್ ಬಣ) ಅಭ್ಯರ್ಥಿ ಮನೇರಾ ಅವರು ಎನ್ ಸಿಪಿ ಶಾಸಕ ಪ್ರತಾಪ್ ಬಾಬುರಾವ್ ಸರ್ನಾಯಕ್ ಅವರ ಚುನಾವಣಾ ವಿಜಯವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಇದಲ್ಲದೆ ದೇವೇಂದ್ರ ಫಡ್ನವೀಸ್ ಅವರ ಗೆಲುವನ್ನು ಪ್ರಶ್ನಿಸಿ ಕಾಂಗ್ರೆಸ್ನ ಪ್ರಫುಲ್ಲ ವಿನೋದರಾವ್ ಗುಡಾಧೆ ಅವರು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದ ಮೊರೆ ಹೋಗಿದ್ದಾರೆ.







