ಮಹಾರಾಷ್ಟ್ರ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆಗೆ ಸುಪ್ರೀಂ ಷರತ್ತುಬದ್ಧ ಒಪ್ಪಿಗೆ

ಹೊಸದಿಲ್ಲಿ: ಒಟ್ಟು ಮೀಸಲಾತಿ ಶೇಕಡ 50ರ ಮಿತಿಯನ್ನು ದಾಟಿದ ಕ್ಷೇತ್ರಗಳನ್ನು ಹೊರತುಪಡಿಸಿ ಮಹಾರಾಷ್ಟ್ರದ ಎಲ್ಲ ಮಹಾನಗರ ಪಾಲಿಕೆ, ಜಿಲ್ಲಾಪಂಚಾಯ್ತಿ ಹಾಗೂ ಪಂಚಾಯ್ತಿ ಸಮಿತಿಗಳ ಚುನಾವಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಆರಂಭಿಸಿದ ಪ್ರಕ್ರಿಯೆಗಳಿಗೆ ಇದ್ದ ತಡೆಯನ್ನು ಸುಪ್ರೀಂಕೋರ್ಟ್ ನಿವಾರಿಸಿದೆ. ರಾಜ್ಯದ 29 ಮಹಾನಗರ ಪಾಲಿಕೆಗಳ ಪೈಕಿ ಎರಡು ಪಾಲಿಕೆಗಳಲ್ಲಿ ಮೀಸಲಾತಿ ಶೇಕಡ 50ರ ಮಿತಿಗಿಂತ ಅಧಿಕವಾಗಿದೆ ಎಂದು ಆಯೋಗ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.
ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಗ್ಚಿ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಹಿರಿಯ ವಕೀಲ ಬಲಬೀರ್ ಸಿಂಗ್ ಅವರು ಆಯೋಗದ ಪರವಾಗಿ ಹೇಳಿಕೆ ನೀಡಿ, 29 ಮಹಾನಗರ ಪಾಲಿಕೆಗಳ ಪೈಕಿ ಎರಡರಲ್ಲಿ ಮೀಸಲಾತಿ ಗರಿಷ್ಠ ಮಿತಿಯಾದ ಶೇಕಡ 50ನ್ನು ಮೀರಿದೆ. 32 ಜಿಲ್ಲಾಪಂಚಾಯ್ತಿ ಮತ್ತು 336 ಪಂಚಾಯ್ತಿ ಸಮಿತಿಗಳ ಮೀಸಲಾತಿ ಪ್ರಮಾಣವನ್ನು ಕೂಡಾ ಶೀಘ್ರದಲ್ಲೇ ಲೆಕ್ಕಾಚಾರ ಮಾಡಲಾಗುತ್ತದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಮೂರು ವರ್ಗಗಳ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸುವಂತೆ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿತು. ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಆಯೋಗ ಶೀಘ್ರವೇ ಪ್ರಕಟಿಸಲಿದೆ.
ಡಿಸೆಂಬರ್ 2ರಂದು ಚುನಾವಣೆ ನಡೆಯುವ 246 ನಗರಸಭೆಗಳು ಮತ್ತು 42 ನಗರ ಪಂಚಾಯ್ತಿಗಳ ಪೈಕಿ 40 ನಗರಸಭೆ ಹಾಗೂ 17 ನಗರ ಪಂಚಾಯ್ತಿಗಳಲ್ಲಿ ಮೀಸಲಾತಿ ಶೇಕಡ 50ರ ಮಿತಿಗಿಂತ ಅಧಿಕವಿದೆ ಎಂದೂ ಆಯೋಗ ಮಾಹಿತಿ ನೀಡಿತು. ಆದರೆ ದಾವೆಗಳನ್ನು ಇತ್ಯರ್ಥಪಡಿಸುವವರೆಗೆ ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಶೇಕಡ 50ರ ಮಿತಿಯನ್ನು ದಾಟುವಂತಿಲ್ಲ ಎಂದು ಸ್ಪಷ್ಟಪಡಿಸಿತು.





