ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ ಪ್ರಕರಣ : ಪ್ರಮುಖ ಆರೋಪಿ ಸಬ್ ಇನ್ಸ್ ಪೆಕ್ಟರ್ ಗೋಪಾಲ್ ಬಂಧನ

Photo credit: newindianexpress.com
ಮುಂಬೈ: ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ನಡೆದಿದ್ದ ಮಹಿಳಾ ವೈದ್ಯೆಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಮತ್ತು ಕಿರುಕುಳ ಆರೋಪ ಎದುರಿಸುತ್ತಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಪಾಲ್ ಬದಾನೆ ಶನಿವಾರ ತಡರಾತ್ರಿ ಫಾಲ್ತನ್ ಗ್ರಾಮೀಣ ಪೊಲೀಸ್ ಠಾಣೆಗೆ ಶರಣಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ವೈದ್ಯೆಯ ಆತ್ಮಹತ್ಯೆ ಬಳಿಕ ಗೋಪಾಲ್ ಬದಾನೆ ತಲೆಮರೆಸಿಕೊಂಡಿದ್ದ. ಆತ ಕೊನೆಯ ಬಾರಿಗೆ ಸೋಲಾಪುರ್ ಜಿಲ್ಲೆಯ ಪಂಢರಾಪುರ್ ನಲ್ಲಿದ್ದ ಎನ್ನುವುದು ತಿಳಿದು ಬಂದಿತ್ತು.
ಇದಕ್ಕೂ ಮುನ್ನ, ಈ ಪ್ರಕರಣದ ಎರಡನೆ ಆರೋಪಿಯಾಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ಪ್ರಶಾಂತ್ ಬಂಕರ್ ಎಂಬಾತನನ್ನು ಬಂಧಿಸಿ, ನ್ಯಾಯಾಲಯದೆದುರು ಹಾಜರುಪಡಿಸಲಾಗಿತ್ತು. ಬಳಿಕ, ನ್ಯಾಯಾಲಯ ಆತನನ್ನು ಅಕ್ಟೋಬರ್ 28ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿತ್ತು.
ವೈದ್ಯೆಯ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ ವೇಳೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಪಾಲ್ ಬದಾನೆ ಫಾಲ್ತನ್ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯವದಲ್ಲಿ ನಿರತರಾಗಿದ್ದ. ಈ ಕುರಿತು ಸಾರ್ವಜನಿಕ ಆಕ್ರೋಶ ಭುಗಿಲೇಳುತ್ತಿದ್ದಂತೆಯೇ ಗೋಪಾಲ್ ತಲೆಮರೆಸಿಕೊಂಡಿದ್ದ. ಆರೋಪಿ ಗೋಪಾಲ್ ಬದಾನೆ ಸುರಕ್ಷಿತ ಸ್ಥಳಗಳಲ್ಲಿ ಅಡಗಿಕೊಳ್ಳಲು ಪೊಲೀಸರೇ ನೆರವು ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.





