ಮಹಾರಾಷ್ಟ್ರ | 'ಲಾಡ್ಕಿ ಬಹಿಣʼ ಯೋಜನೆಯಲ್ಲಿ ವಂಚನೆ : 14,000ಕ್ಕೂ ಅಧಿಕ ಪುರುಷರ ಖಾತೆಗೆ ಹಣ ಜಮೆ

ಸಾಂದರ್ಭಿಕ ಚಿತ್ರ
ಮುಂಬೈ: ಮಹಾರಾಷ್ಟ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಜಾರಿಗೆ ತಂದಿರುವ 'ಲಾಡ್ಕಿ ಬಹಿಣʼ ಯೋಜನೆಯಡಿಯಲ್ಲಿ 14,000ಕ್ಕೂ ಅಧಿಕ ಪುರುಷರು ವಂಚನೆಯಿಂದ ಆರ್ಥಿಕ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.
ಕಳೆದ 10 ತಿಂಗಳಲ್ಲಿ 14,298 ಪುರುಷರ ಖಾತೆಗೆ 21.44 ಕೋಟಿ ಜಮೆಯಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಲೆಕ್ಕಪರಿಶೋಧನೆಯಿಂದ ತಿಳಿದುಬಂದಿದೆ. ಫಲಾನುಭವಿಗಳ ಪರಿಶೀಲನಾ ಪ್ರಕ್ರಿಯೆ ವೇಳೆ ಈ ವಂಚನೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ವಾರ್ಷಿಕವಾಗಿ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ 21 ರಿಂದ 65 ವರ್ಷ ವಯಸ್ಸಿನ ಮಹಿಳೆಯರಿಗೆ ತಿಂಗಳಿಗೆ 1,500 ರೂ.ಗಳನ್ನು ನೀಡುವ ಗುರಿಯಿಂದ ಮಹಾರಾಷ್ಟ್ರದಲ್ಲಿ 'ಲಾಡ್ಕಿ ಬಹಿಣʼ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಲೆಕ್ಕಪರಿಶೋಧನೆಯಲ್ಲಿ 14,298 ಪುರುಷರಿಗೆ 21.44 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ತಿಳಿದುಬಂದಿದೆ. ಅವರು ಆನ್ಲೈನ್ ನೋಂದಣಿ ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮನ್ನು ಮಹಿಳಾ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ. ಯೋಜನೆ ಪ್ರಾರಂಭವಾದ ಸುಮಾರು 10 ತಿಂಗಳ ನಂತರ ಈ ದುರುಪಯೋಗ ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಬಡ ಮಹಿಳೆಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಪುರಷರು ಈ ಯೋಜನೆಯ ಲಾಭ ಪಡೆಯುವುದು ಸರಿಯಲ್ಲ. ಅವರಿಂದ ಹಣವನ್ನು ವಸೂಲಿ ಮಾಡಲಾಗುತ್ತದೆ. ಯೋಜನೆಯ ಲಾಭ ಪಡೆದ ಪುರುಷರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.







