ಸಂಸತ್ ಚಲೋ ಯಶಸ್ವಿಗೊಳಿಸಿ: ಆಸ್ಪತ್ರೆಯಿಂದ ಸೋನಮ್ ವಾಂಗ್ಚುಕ್ ಮೊದಲ ಸಂದೇಶ

Photo |indiatoday
ಹೊಸದಿಲ್ಲಿ, ಜು.19: ಜಂತರ್ ಮಂತರ್ನಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹದ ಸ್ಥಳದಿಂದ ತಮ್ಮನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿರುವ ಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರು ‘ಅಕ್ರಮ ಬಂಧನ’ ಎಂದು ಟೀಕಿಸಿದ್ದಾರೆ.
ಆಸ್ಪತ್ರೆಯಿಂದ ಬೆಂಬಲಿಗರಿಗೆ ಕಳುಹಿಸಿರುವ ಮೊದಲ ಸಂದೇಶದಲ್ಲಿ, ಜುಲೈ 20ರಂದು ಸಂಸತ್ ಭವನದತ್ತ ನಡೆಯಲಿರುವ ‘ಭಾರತದ ಎರಡನೇ ಸ್ವಾತಂತ್ರ್ಯ ಚಳುವಳಿ’ ಸಂಸತ್ ಚಲೋ ಮೆರವಣಿಗೆಯನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
‘ಭಯಮುಕ್ತ ಭಾರತ’ ಮತ್ತು ‘ಅನ್ಯಾಯ ಮುಕ್ತ ಭಾರತ’ ಘೋಷಣೆಗಳಡಿ ಕಾಕ್ರೋಚ್ ಜನತಾ ಪಾರ್ಟಿಯಿಂದ ನಡೆಯುತ್ತಿರುವ ಅಭಿಯಾನವು ‘ಭಾರತದ ಎರಡನೇ ಸ್ವಾತಂತ್ರ್ಯ ಚಳುವಳಿ’ ಎಂದು ಅವರು ಹೇಳಿದ್ದಾರೆ. ಈ ಸಂದೇಶವನ್ನು ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು ಸಾರ್ವಜನಿಕರಿಗೆ ತಲುಪಿಸಿದ್ದಾರೆ.
ಮುದ್ದೆಯಾದ ಕಾಗದದ ಮೇಲೆ ಕೈಬರಹದಲ್ಲಿ ಬರೆದಿರುವ ಈ ಸಂದೇಶದ ಚಿತ್ರವನ್ನು ವಾಂಗ್ಚುಕ್ ಅವರ ಎಕ್ಸ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಸಂದೇಶದಲ್ಲಿ ಉಪವಾಸ ಸತ್ಯಾಗ್ರಹದ ಸ್ಥಳವನ್ನು ತೆರವುಗೊಳಿಸಿರುವುದು, ಪ್ರತಿಭಟನಾ ಫಲಕವನ್ನು ತೆಗೆದುಹಾಕಿರುವುದು ಹಾಗೂ ಪ್ರತಿಭಟನೆಯನ್ನು ಮುಂದುವರಿಸುವ ಅಗತ್ಯವನ್ನು ಉಲ್ಲೇಖಿಸಲಾಗಿದೆ.
ದೇಶವು ‘ಅನ್ಯಾಯದಿಂದ ಮುಕ್ತವಾಗಬೇಕು’ ಎಂದು ಒತ್ತಿ ಹೇಳಿರುವ ವಾಂಗ್ಚುಕ್, ತಮ್ಮ ಬಂಧನವನ್ನು ಅದೇ ಅನ್ಯಾಯದ ಒಂದು ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜುಲೈ 20ರಂದು ನಡೆಯಲಿರುವ ಸಂಸತ್ ಚಲೋ ಮೆರವಣಿಗೆಯಲ್ಲಿ ಪಾಲ್ಗೊಂಡು ಅದನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.






