ಗುಂಪು ಹಲ್ಲೆಯಲ್ಲಿ ಮೃತಪಟ್ಟ ಅಶ್ರಫ್ ಸಹೋದರನ ಹೋರಾಟದ ಕುರಿತು ವರದಿ: ಪತ್ರಕರ್ತೆ ಫಿದಾ ಫಾತಿಮಾಗೆ HRRF ಪ್ರಶಸ್ತಿ
ಮಾನವೀಯ ಒಗ್ಗಟ್ಟಿನ ಅತ್ಯುತ್ತಮ ವರದಿ ವಿಭಾಗದಲ್ಲಿ ಮನ್ನಣೆ

ಫಿದಾ ಫಾತಿಮಾ (Photo: Maktoob Media)
ಹೊಸದಿಲ್ಲಿ: ತನ್ನ ಸಹೋದರನನ್ನು ಗುಂಪು ಹಲ್ಲೆಯಲ್ಲಿ ಕಳೆದುಕೊಂಡ ನೋವಿನ ನಡುವೆಯೂ, ಮತ್ತೊಂದು ಗುಂಪು ಹಲ್ಲೆಯಲ್ಲಿ ಹತ್ಯೆಗೀಡಾದ ದಲಿತ ವಲಸೆ ಕಾರ್ಮಿಕನಿಗೆ ನ್ಯಾಯ ದೊರಕಿಸಿಕೊಡಲು ಹೋರಾಡಿದ ಕೇರಳಂನ ಮುಸ್ಲಿಂ ವ್ಯಕ್ತಿಯ ಕುರಿತು ವರದಿ ಮಾಡಿದ ಮಕ್ತೂಬ್ ನ ಹಿರಿಯ ಉಪಸಂಪಾದಕಿ ಫಿದಾ ಫಾತಿಮಾ ಅವರಿಗೆ ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯ (HRRF) ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿದೆ.
‘ಮಾನವೀಯ ಒಗ್ಗಟ್ಟಿನ ಅತ್ಯುತ್ತಮ ವರದಿ’ ವಿಭಾಗದಲ್ಲಿ ಫಿದಾ ಫಾತಿಮಾ ಅವರ ವರದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಧಾರ್ಮಿಕ, ಜನಾಂಗೀಯ ಅಥವಾ ಸಾಂಸ್ಕೃತಿಕ ಭಿನ್ನತೆಗಳ ನಡುವೆಯೂ ವ್ಯಕ್ತವಾಗುವ ಏಕತೆ ಮತ್ತು ಮಾನವೀಯತೆಯ ಕಾರ್ಯಗಳನ್ನು ಬಿಂಬಿಸುವ ವರದಿಗಳನ್ನು ಈ ವಿಭಾಗದಲ್ಲಿ ಗುರುತಿಸಲಾಗುತ್ತದೆ.
BBC ನ್ಯೂಸ್ ಮರಾಠಿಯ ಶ್ರೀಕಾಂತ್ ಫಕೀರ್ಬಾ ಬಂಗಾಲೆ ಮತ್ತು PARI ನೆಟ್ವರ್ಕ್ ನ ಜಿಗ್ಯಾಸಾ ಮಿಶ್ರಾ ಸೇರಿದಂತೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಪತ್ರಕರ್ತರ ಪೈಕಿ ಫಿದಾ ಫಾತಿಮಾ ಅವರನ್ನು ವಿಜೇತರಾಗಿ ಘೋಷಿಸಲಾಗಿದೆ.
‘ತನ್ನ ಸಹೋದರನನ್ನು ಗುಂಪು ಹಲ್ಲೆಯಲ್ಲಿ ಕಳೆದುಕೊಂಡ ಕೇರಳಂನ ಮುಸ್ಲಿಂ ವ್ಯಕ್ತಿಯೊಬ್ಬ ಹತ್ಯೆಗೀಡಾದ ದಲಿತ ವಲಸೆ ಕಾರ್ಮಿಕನಿಗೆ ನ್ಯಾಯ ಕೊಡಿಸಲು ಮುಂದಾಗುತ್ತಾನೆ’ ಎಂಬ ವಿಷಯದ ಅವರ ಪ್ರಶಸ್ತಿ ವಿಜೇತ ವರದಿಯನ್ನು ಮಕ್ತೂಬ್ 2025ರ ಡಿ. 24ರಂದು ಪ್ರಕಟಿಸಿತ್ತು.
ಮಂಗಳೂರಿನಲ್ಲಿ ಹಿಂದುತ್ವದ ಗುಂಪಿನ ಗುಂಪು ಹಲ್ಲೆಗೆ ಅಶ್ರಫ್ ಮೃತಪಟ್ಟಿದ್ದರು. ಅವರ ಸಹೋದರ ಅಬ್ದುಲ್ ಜಬ್ಬಾರ್, ಕೇರಳಂನಲ್ಲಿ ಗುಂಪು ಹಲ್ಲೆಯಿಂದ ಹತ್ಯೆಗೀಡಾದ ದಲಿತ ವಲಸೆ ಕಾರ್ಮಿಕ ರಾಮ್ ನಾರಾಯಣ್ ಬಾಘೇಲ್ ಅವರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಸಿದ್ದರು. ಸ್ವತಃ ತಮ್ಮ ಕುಟುಂಬವೇ ಗುಂಪು ಹಲ್ಲೆಯ ನೋವು ಅನುಭವಿಸಿದ್ದರೂ, ಮತ್ತೊಂದು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಅವರು ಮುಂದಾಗಿದ್ದ ಮಾನವೀಯ ಹೋರಾಟವನ್ನು ಫಿದಾ ಫಾತಿಮಾ ತಮ್ಮ ವರದಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಫಿದಾ ಫಾತಿಮಾ ಅವರು ಮಕ್ತೂಬ್ ನಲ್ಲಿ ಹಿರಿಯ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು HRRF ಪತ್ರಿಕೋದ್ಯಮ ಫೆಲೋಶಿಪ್ ಕೂಡ ಪಡೆದಿದ್ದಾರೆ.







