ಹಾಜಿ ಮಲಂಗ್ ದರ್ಗಾದ ಉರೂಸ್ ನಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಸಂಘ ಪರಿವಾರದ ಕಾರ್ಯಕರ್ತರು
ವೀಡಿಯೊ ವೈರಲ್; ವ್ಯಾಪಕ ಆಕ್ರೋಶ

ಮುಂಬೈ: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮಲಂಗ್ ಗಡ್‌ನಲ್ಲಿರುವ ಹಾಜಿ ಮಲಂಗ್ ದರ್ಗಾದಲ್ಲಿ ನಡೆದ ವಾರ್ಷಿಕ ಉರೂಸ್ ಸಂದರ್ಭ ಸಂಘ ಪರಿವಾರದ ಗುಂಪೊಂದು ಕೇಸರಿ ಪತಾಕೆ ಬೀಸಿದ ಹಾಗೂ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಘಟನೆ ನಡೆದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊದ ಕಾಲವನ್ನು ಇನ್ನೂ ನಿರ್ಧರಿಸಿಲ್ಲ. ಆದರೆ, ಅದರ ಪ್ರಸಾರ ವ್ಯಾಪಕ ಚರ್ಚೆ ಹಾಗೂ ಆಕ್ರೋಶವನ್ನು ಹುಟ್ಟು ಹಾಕಿದೆ.
ಘಟನೆ ನಡೆಯುವಾಗ ಪೊಲೀಸರು ಸ್ಥಳದಲ್ಲೇ ಇರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಆದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ಕೋಮ ಸೌಹಾರ್ದತೆಯನ್ನು ಕಾಪಾಡುವಲ್ಲಿ ಪೊಲೀಸರ ಪಾತ್ರದ ಬಗ್ಗೆ ಕಳವಳ ಉಂಟು ಮಾಡಿದೆ.
ಹಾಜಿ ಮಲಾಂಗ್ ದರ್ಗಾವನ್ನು ಸಂಘ ಪರಿವಾರ ವಿವಾದದ ಸ್ಥಳವನ್ನಾಗಿ ಮಾಡುತ್ತಿದೆ. ಅದು ಹಿಂದಿನಿಂದಲೂ ಅದನ್ನು ದೇವಾಲಯ ಎಂದು ಪ್ರತಿಪಾದಿಸುತ್ತಿದೆ. ಆದರೆ, ಈ ಪ್ರತಿಪಾದನೆಯನ್ನು ನಿರಾಕರಿಸಿರುವ ದರ್ಗಾ ಸಮಿತಿ, ಇದು ದರ್ಗಾ. ಎಲ್ಲಾ ನಂಬಿಕೆಯ ಜನರ ಆರಾಧನಾ ಸ್ಥಳ. ಇದರ ಧಾರ್ಮಿಕ ಮಹತ್ವವನ್ನು ಬದಲಾಯಿಸುವ ಇಂತಹ ಪ್ರಯತ್ನ ಸ್ವೀಕಾರ್ಹವಲ್ಲ ಎಂದು ಹೇಳಿದೆ.
ಈ ಘಟನೆಯನ್ನು ಸಾಮಾಜಿಕ ಹೋರಾಟಗಾರ ಇಮ್ರಾನ್ ಖಾನ್ ಖಂಡಿಸಿದ್ದಾರೆ. ‘‘ಇದು ಶಾಂತಿಯನ್ನು ಕದಡುವ ಪ್ರಯತ್ನ. ಧಾರ್ಮಿಕ ಸ್ಥಳಗಳಲ್ಲಿ ಇಂತಹ ಪ್ರಚೋದನೆಯನ್ನು ತಡೆಯಲು ಆಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು’’ ಎಂದು ಹೇಳಿದ್ದಾರೆ.
ಇತರರು ವೀಡಿಯೊದ ಮೂಲ ಹಾಗೂ ಕಾಲವನ್ನು ನಿರ್ಧರಿಸಲು ಕೂಲಂಕಷ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.