ಕೋಝಿಕ್ಕೋಡ್ ನಲ್ಲಿ ಎ.ಪಿ. ಉಸ್ತಾದ್ರನ್ನು ಭೇಟಿಯಾಗಲಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹೀಂ

Photo: grandmufti.in
ಕೋಝಿಕ್ಕೋಡ್: ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹೀಂ ಅವರು ಸೆ.13ರಂದು ಕೇರಳಕ್ಕೆ ಭೇಟಿ ನೀಡಲಿದ್ದು, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿಯಾಗಲಿದ್ದಾರೆ.
ಐದು ದಿನಗಳ ಭಾರತ ಪ್ರವಾಸದ ಭಾಗವಾಗಿ ಅನ್ವರ್ ಇಬ್ರಾಹೀಂ ಕೇರಳಕ್ಕೆ ಆಗಮಿಸುತ್ತಿದ್ದಾರೆ. ದಿಲ್ಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಕೋಝಿಕ್ಕೋಡ್ ಗೆ ಆಗಮಿಸಲಿದ್ದಾರೆ.
ಮರ್ಕಝ್ ಸೆಂಟ್ರಲ್ ಕ್ಯಾಂಪಸ್ ನಲ್ಲಿ ಗ್ರ್ಯಾಂಡ್ ಮುಫ್ತಿ ಅವರೊಂದಿಗೆ ಮಲೇಷ್ಯಾ ಪ್ರಧಾನಿ ಮಾತುಕತೆ ನಡೆಸಲಿದ್ದು, ಮರ್ಕಝ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯುವ ವಿಶೇಷ ಪ್ರಾರ್ಥನಾ ಸಂಗಮ ಹಾಗೂ ಗ್ರ್ಯಾಂಡ್ ಮುಫ್ತಿ ಆಯೋಜಿಸುವ ಔತಣಕೂಟದಲ್ಲೂ ಭಾಗವಹಿಸಲಿದ್ದಾರೆ.
ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳ ಪ್ರಮುಖರು ಭಾಗವಹಿಸುವ ಚರ್ಚೆಯೂ ಈ ಸಂದರ್ಭದಲ್ಲಿ ನಡೆಯಲಿದೆ.
ಮರ್ಕಝ್ ಭೇಟಿಯ ಬಳಿಕ ಅನ್ವರ್ ಇಬ್ರಾಹೀಂ ಅವರು ಗ್ರ್ಯಾಂಡ್ ಮುಫ್ತಿ ಅವರೊಂದಿಗೆ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಕೇಂದ್ರವಾದ ಮಡವೂರ್ ಸಿಎಂ ವಲಿಯುಲ್ಲಾಹಿ ಮಖಾಮ್ ಗೂ ಭೇಟಿ ನೀಡಲಿದ್ದಾರೆ.
ಗ್ರ್ಯಾಂಡ್ ಮುಫ್ತಿ ಅವರನ್ನು ಭೇಟಿಯಾಗಲು ಅನ್ವರ್ ಇಬ್ರಾಹೀಂ ಕೇರಳಕ್ಕೆ ಆಗಮಿಸುತ್ತಿರುವುದು ಇದು ಎರಡನೇ ಬಾರಿ. ಮಲೇಷ್ಯಾ ಪ್ರಧಾನಿಯಾಗುವ ಕೆಲವೇ ವಾರಗಳ ಮೊದಲು, 2022ರ ಸೆಪ್ಟೆಂಬರ್ ನಲ್ಲಿ ಅವರು ಮೊದಲ ಬಾರಿಗೆ ಮರ್ಕಝ್ ಗೆ ಭೇಟಿ ನೀಡಿದ್ದರು. ಅಂದು ಕೂಡಾ ಅನ್ವರ್ ಇಬ್ರಾಹಿಂ ಅವರು ಕಾಂತಪುರಂ ಅವರೊಂದಿಗೆ ಮಡವೂರ್ ಮಖಾಮ್ ಗೆ ಭೇಟಿ ನೀಡಿದ್ದರು.
ಧಾರ್ಮಿಕ ಪಂಡಿತರಿಗೆ ನೀಡಲಾಗುವ ಮಲೇಷ್ಯಾದ ಅತ್ಯುನ್ನತ ಗೌರವವಾದ ‘ಹಿಜ್ರಾ ಪ್ರಶಸ್ತಿ’ಯನ್ನು 2023ರಲ್ಲಿ ಮಲೇಷ್ಯಾ ಸರಕಾರ ಕಾಂತಪುರಂ ಉಸ್ತಾದರಿಗೆ ಪ್ರದಾನಿಸಿತ್ತು. ಕಾಂತಪುರಂ ಉಸ್ತಾದರ ಆರು ದಶಕಗಳ ಹದೀಸ್ ಬೋಧನಾ ಸೇವೆಯನ್ನು ಗೌರವಿಸಿ ಮಲೇಷ್ಯಾ ಸರಕಾರದ ನೇತೃತ್ವದಲ್ಲಿ 2023, 2024 ಮತ್ತು 2025ರಲ್ಲಿ ಕೌಲಾಲಂಪುರದಲ್ಲಿ ಗ್ರ್ಯಾಂಡ್ ಮುಫ್ತಿ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಹದೀಸ್ ಪಠಣ ಸಂಗಮಗಳನ್ನು ಆಯೋಜಿಸಲಾಗಿತ್ತು.
ಮಲೇಷ್ಯಾದಲ್ಲಿರುವ ಭಾರತೀಯ ವಲಸಿಗರ ಕಲ್ಯಾಣ ಹಾಗೂ ಉದ್ಯೋಗ ಸಮಸ್ಯೆಗಳ ವಿಚಾರದಲ್ಲೂ ಗ್ರ್ಯಾಂಡ್ ಮುಫ್ತಿ ಅವರು ಈ ಹಿಂದೆ ಮಧ್ಯಸ್ಥಿಕೆ ವಹಿಸಿದ್ದರು. ಕೇರಳದಿಂದ, ವಿಶೇಷವಾಗಿ ಕೋಝಿಕ್ಕೋಡ್ ನಿಂದ ಮಲೇಷ್ಯಾಕ್ಕೆ ನೇರ ವಿಮಾನ ಸೇವೆ ಆರಂಭಿಸುವ ಕುರಿತಂತೆಯೂ ಅವರು ಮಧ್ಯಸ್ಥಿಕೆ ನಡೆಸಿದ್ದರು.
ಮಲೇಷ್ಯಾ ಪ್ರಧಾನಿಯ ಭಾರತ ಪ್ರವಾಸ ಹಾಗೂ ಕೇರಳ ಭೇಟಿಯು ಉಭಯ ದೇಶಗಳ ನಡುವಿನ ವಾಣಿಜ್ಯ, ಪ್ರವಾಸೋದ್ಯಮ, ಹೂಡಿಕೆ, ಆರ್ಥಿಕ ಸಹಕಾರ, ಶಿಕ್ಷಣ ಮತ್ತು ಸಂಪರ್ಕ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಚೈತನ್ಯ ಹಾಗೂ ಪ್ರಗತಿಗೆ ಕಾರಣವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.






