ಮಾಲೇಗಾಂವ್ ಪ್ರಕರಣ| ನಾಳೆಯಿಂದ ವಿಚಾರಣೆಗೆ ಹಾಜರಾಗುವಂತೆ ಪ್ರಜ್ಞಾ ಸಿಂಗ್ ಠಾಕೂರ್ ಗೆ ವಿಶೇಷ ನ್ಯಾಯಾಲಯ ಸೂಚನೆ
ವಿಚಾರಣೆಗೆ ಬಾರದಿದ್ದರೆ ಕ್ರಮ ಎಂದು ಎಚ್ಚರಿಕೆ ನೀಡಿದ ಕೋರ್ಟ್

ಮುಂಬೈ : ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಫೆ. 27ರಿಂದ ತನ್ನ ಮುಂದೆ ಹಾಜರಾಗುವಂತೆ ಪ್ರಕರಣದ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ವಿಶೇಷ ಎನ್ಐಎ ನ್ಯಾಯಾಲಯ ಸೂಚಿಸಿದೆ ಹಾಗೂ ವಿಚಾರಣೆಗೆ ಹಾಜರಾಗದೇ ಇದ್ದರೆ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದೆ.
ವೈದ್ಯಕೀಯ ನೆಲೆಯಲ್ಲಿ ಒಂದು ದಿನ ವಿನಾಯಿತಿ ಕೋರಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಸಲ್ಲಿಸಿದ ಮನವಿಗೆ ಅನುಮತಿ ನೀಡುವ ಸಂದರ್ಭ ವಿಶೇಷ ನ್ಯಾಯಾಧೀಶ ಎ.ಕೆ. ಲಾಹೋಟಿ ಅವರು ಈ ನಿರ್ದೇಶನ ನೀಡಿದ್ದಾರೆ.
ಠಾಕೂರ್ ಹಾಗೂ ಇತರ 6 ಮಂದಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ನಿಯಮಗಳ ಅಡಿಯ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಪ್ರಸಕ್ತ ಸಿಆರ್ಪಿಸಿ ಅಡಿಯಲ್ಲಿ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ.
ತನ್ನ ಆದೇಶದಲ್ಲಿ ವಿಶೇಷ ನ್ಯಾಯಾಧೀಶ ಲಾಹೋಟಿ ಅವರು ಠಾಕೂರ್ ಹಾಗೂ ಇತರ ಕೆಲವು ಆರೋಪಿಗಳು ನಿಗದಿತ ದಿನಾಂಕದಲ್ಲಿ ನ್ಯಾಯಾಲಯಕ್ಕೆ ನಿರಂತರ ಗೈರು ಹಾಜರಾಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ.







