19,300 ರೂ. ಹಣಕ್ಕಾಗಿ ಮೃತ ತಂಗಿಯ ಅಸ್ಥಿಪಂಜರ ಹೊತ್ತು ಬ್ಯಾಂಕ್ಗೆ ಬಂದ ಸಹೋದರ!

Screengrab: X
ಕಿಯೋಂಝಾರ್ (ಒಡಿಶಾ): ಬ್ಯಾಂಕಿಂಗ್ ನಿಯಮಗಳ ಕಠಿಣ ಅನುಸರಣೆ ನಡುವೆ ಸಿಲುಕಿದ ಬಡವನ ನೋವನ್ನು ಬಯಲಿಗೆಳೆದ ಮನಕಲುಕುವ ಘಟನೆ ಒಡಿಶಾದ ಕಿಯೋಂಝಾರ್ ಜಿಲ್ಲೆಯಲ್ಲಿ ನಡೆದಿದೆ.
ಜಿತು ಮುಂಡಾ ಎಂಬ ವ್ಯಕ್ತಿ ತನ್ನ ಮೃತ ಸಹೋದರಿ ಕಾಕ್ರಾ ಮುಂಡಾ ಅವರ ಅಸ್ಥಿಪಂಜರವನ್ನು ಭುಜದ ಮೇಲೆ ಹೊತ್ತುಕೊಂಡು, ಸುಡುವ ಬಿಸಿಲಿನಲ್ಲಿ ಮೂರು ಕಿಲೋಮೀಟರ್ ನಡೆದು ಬ್ಯಾಂ ಕ್ಗೆ ತೆರಳಿದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಕಿಯೋಂಝಾರ್ ನ ಡಯಾನಾಲಿ ಗ್ರಾಮದ ನಿವಾಸಿಯಾಗಿರುವ ಜಿತು ಮುಂಡಾ ಅವರ ಸಹೋದರಿ ಕಾಕ್ರಾ ಮುಂಡಾ ಮಲ್ಲಿಪಾಸಿಯ ಒಡಿಶಾ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು. ಎರಡು ತಿಂಗಳ ಹಿಂದೆ ಕಾಕ್ರಾ ನಿಧನರಾಗಿದ್ದು, ಅವರ ಪತಿ ಹಾಗೂ ಏಕೈಕ ಮಗು ಮೊದಲೇ ಮೃತಪಟ್ಟಿದ್ದರು. ಹೀಗಾಗಿ ಜಿತು ಮಾತ್ರ ಆಕೆಯ ಏಕೈಕ ಜೀವಿತ ಸಂಬಂಧಿಯಾಗಿ ಉಳಿದಿದ್ದರು.
ಸಹೋದರಿಯ ಖಾತೆಯಲ್ಲಿ ಉಳಿದಿದ್ದ 19,300 ರೂ. ಹಣವನ್ನು ಹಿಂಪಡೆಯಲು ಜಿತು ಬ್ಯಾಂಕ್ ಸಂಪರ್ಕಿಸಿದಾಗ, ಖಾತೆದಾರರು ಸ್ವತಃ ಹಾಜರಾಗಬೇಕು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿ, ಹಣ ನೀಡಲು ನಿರಾಕರಿಸಿದರು.
ಶಿಕ್ಷಣವಿಲ್ಲದ ಬುಡಕಟ್ಟು ಸಮುದಾಯದ ಜಿತು, ಮರಣ ಪ್ರಮಾಣಪತ್ರ ಅಥವಾ ಉತ್ತರಾಧಿಕಾರ ದಾಖಲೆಗಳ ಅರಿವು ಇಲ್ಲದೆ, ಪ್ರಕ್ರಿಯೆಯ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ನಿರಾಶೆಯಿಂದ ಹಿಂತಿರುಗಿದರು.
ಸೋಮವಾರ, ಜಿತು ಗ್ರಾಮದ ಸ್ಮಶಾನಕ್ಕೆ ತೆರಳಿ ಸಹೋದರಿಯ ಸಮಾಧಿಯನ್ನು ಅಗೆದು, ಅಸ್ಥಿಪಂಜರವನ್ನು ಹೊರತೆಗೆದು ಬಟ್ಟೆಯಲ್ಲಿ ಸುತ್ತಿಕೊಂಡರು. ಬಳಿಕ ಉರಿಯುತ್ತಿರುವ ಬಿಸಿಲಿನಲ್ಲಿ 3 ಕಿ.ಮೀ ನಡೆದು ಬ್ಯಾಂಕ್ ಗೆ ತಲುಪಿದರು.
ಬ್ಯಾಂಕ್ ಗೆ ಅಸ್ಥಿಪಂಜರ ಹೊತ್ತು ಬಂದ ದೃಶ್ಯ ಕಂಡ ಸ್ಥಳೀಯರು ದಿಗ್ಭ್ರಮೆಗೆ ಒಳಗಾದರು. ಕೆಲವರು ಕಣ್ಣೀರಿಟ್ಟರೆ, ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. “ಬಡವನೊಬ್ಬ ತನ್ನದೇ ಹಣವನ್ನು ಪಡೆಯಲು ಇಷ್ಟು ಕಷ್ಟ ಅನುಭವಿಸಬೇಕೇ?” ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಗ್ರಾಮ ಪಂಚಾಯತ್ ಮೂಲಕ ಪರಿಶೀಲನೆ ನಡೆಸಬಹುದಿತ್ತು ಅಥವಾ ಸ್ಥಳೀಯ ಮಟ್ಟದಲ್ಲಿ ದೃಢೀಕರಣ ಮಾಡಬಹುದಿತ್ತು ಎಂಬ ಆಕ್ರೋಶವೂ ವ್ಯಕ್ತವಾಯಿತು.
ಘಟನೆ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಜಿತು ಅವರನ್ನು ಸಮಾಧಾನಪಡಿಸಿದರು. ಪ್ರಕರಣವನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಲಾಗುವುದು ಹಾಗೂ ಬ್ಯಾಂಕ್ನಿಂದ ಸ್ಪಷ್ಟನೆ ಕೇಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.






