Madhya Pradesh | ಗರಂ ಮಸಾಲವನ್ನು ʼಹೆರಾಯಿನ್ʼ ಎಂದು ತಪ್ಪಾಗಿ ಗುರುತಿಸಿ ಉದ್ಯಮಿಗೆ 57 ದಿನ ಜೈಲು ಶಿಕ್ಷೆ; 10 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ

ಸಾಂದರ್ಭಿಕ ಚಿತ್ರ (AI)
ಭೋಪಾಲ್: ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯಲ್ಲಿ ಗರಂ ಮಸಾಲ ಮತ್ತು ಆಮ್ಚೂರ್ ಪೌಡರ್ ಪ್ಯಾಕೆಟ್ಗಳನ್ನು ಹೆರಾಯಿನ್ ಹಾಗೂ ಸೈಕೋಟ್ರೋಪಿಕ್ ಮಾದಕ ವಸ್ತು ಎಂದು ತಪ್ಪಾಗಿ ಗುರುತಿಸಿದ ಪರಿಣಾಮ 57 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದ ಉದ್ಯಮಿಯೊಬ್ಬರಿಗೆ ಮಧ್ಯಪ್ರದೇಶ ಹೈಕೋರ್ಟ್ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
‘ಅಜಯ್ ಸಿಂಗ್ Vs ಮಧ್ಯಪ್ರದೇಶ ರಾಜ್ಯ ಮತ್ತು ಇತರರು’ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಖೋಟ್, ವಿಧಿವಿಜ್ಞಾನ ಪರೀಕ್ಷೆಯಲ್ಲಿನ ವಿಳಂಬ ಮತ್ತು ಸಮರ್ಪಕ ಪ್ರಯೋಗಾಲಯ ಸೌಲಭ್ಯಗಳ ಕೊರತೆಯಿಂದ ಅರ್ಜಿದಾರರು ಅನಗತ್ಯವಾಗಿ 57 ದಿನ ಜೈಲು ವಾಸ ಅನುಭವಿಸಬೇಕಾಯಿತು ಎಂದು ಅಭಿಪ್ರಾಯಪಟ್ಟರು.
ಪ್ರಕರಣದ ಪ್ರಕಾರ, 2010ರ ಮೇ ತಿಂಗಳಲ್ಲಿ ಉದ್ಯಮಿ ಅಜಯ್ ಸಿಂಗ್ ಅವರು ಮಲೇಷ್ಯಾಕ್ಕೆ ತೆರಳಲು ಭೋಪಾಲ್ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದರು. ಭೋಪಾಲ್ ವಿಮಾನ ನಿಲ್ದಾಣದಲ್ಲಿ ನಡೆದ ಭದ್ರತಾ ತಪಾಸಣೆಯ ವೇಳೆ ಅವರ ಬ್ಯಾಗ್ನಲ್ಲಿದ್ದ ಗರಂ ಮಸಾಲ ಮತ್ತು ಆಮ್ಚೂರ್ ಪೌಡರ್ ಪ್ಯಾಕೆಟ್ ಗಳನ್ನು ಎಕ್ಸ್ಪ್ಲೋಸಿವ್ ಟ್ರೇಸ್ ಡಿಟೆಕ್ಟರ್ (ETD) ಯಂತ್ರವು ಅನುಮಾನಾಸ್ಪದ ವಸ್ತುಗಳೆಂದು ಗುರುತಿಸಿತ್ತು.
ಯಂತ್ರದ ಪರೀಕ್ಷೆಯಲ್ಲಿ ಪ್ಯಾಕೆಟ್ಗಳಲ್ಲಿ ಹೆರಾಯಿನ್ ಹಾಗೂ MDEA ಎಂಬ ಸೈಕೋಟ್ರೋಪಿಕ್ ವಸ್ತು ಇರಬಹುದೆಂಬ ಅನುಮಾನ ವ್ಯಕ್ತವಾಗಿತ್ತು. ಇದರ ಆಧಾರದಲ್ಲಿ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆ (NDPS) ಅಡಿಯಲ್ಲಿ ಸಿಂಗ್ ಅವರನ್ನು ತಕ್ಷಣ ಬಂಧಿಸಲಾಗಿತ್ತು.
ಜೂನ್ 30, 2010ರಂದು ಬಂದ ಕೇಂದ್ರ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ (CFSL) ವರದಿಯಲ್ಲಿ ಪ್ಯಾಕೆಟ್ಗಳಲ್ಲಿ ಯಾವುದೇ ನಿಷಿದ್ಧ ವಸ್ತುಗಳಿಲ್ಲ ಎಂದು ತಿಳಿಸಲಾಯಿತು. ಇದಾದ ಬಳಿಕ 57 ದಿನಗಳ ಜೈಲು ವಾಸ ಅನುಭವಿಸಿದ್ದ ಸಿಂಗ್ ಅವರನ್ನು ಜುಲೈ 2ರಂದು ಬಿಡುಗಡೆ ಮಾಡಲಾಯಿತು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ವಿಶೇಷ NDPS ನ್ಯಾಯಾಲಯ ಅಂಗೀಕರಿಸಿತು.
ಅಕ್ರಮ ಬಂಧನದಿಂದ ಮಾನಸಿಕ ಯಾತನೆ ಅನುಭವಿಸಬೇಕಾಯಿತು ಹಾಗೂ ತಮ್ಮ ಖ್ಯಾತಿಗೆ ಹಾನಿಯಾಗಿದೆ ಎಂದು ಆರೋಪಿಸಿ ಅಜಯ್ ಸಿಂಗ್ ಹೈಕೋರ್ಟ್ನಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ನಲ್ಲಿ ಸಿಂಗ್ ಪರ ವಕೀಲರು, ETD ಯಂತ್ರವು ಭಾರತೀಯ ಮಸಾಲೆಗಳನ್ನು ತಪ್ಪಾಗಿ ಮಾದಕ ವಸ್ತುಗಳೆಂದು ಗುರುತಿಸುತ್ತಿದೆ ಎಂದು ವಾದಿಸಿದರು. ಗರಂ ಮಸಾಲ ಮತ್ತು ಆಮ್ಚೂರ್ನ ಇತರ ಬ್ರಾಂಡ್ಗಳ ಮೇಲೂ ನಡೆಸಿದ ಪರೀಕ್ಷೆಗಳಲ್ಲಿ ಇದೇ ರೀತಿಯ ತಪ್ಪು ಎಚ್ಚರಿಕೆಗಳು ಕಂಡುಬಂದಿದ್ದವು ಎಂಬುದನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ETD ಯಂತ್ರದ ವರದಿ ಕೇವಲ ಪ್ರಾಥಮಿಕ ಸೂಚನೆಯಾಗಿದ್ದು, ಅದನ್ನೇ ಅಂತಿಮ ಸಾಕ್ಷ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. “ವಸ್ತುವಿನ ಬಗ್ಗೆ ಸ್ಪಷ್ಟತೆ ಪಡೆಯಲು ಅಧಿಕಾರಿಗಳು ತಕ್ಷಣ ಸೂಕ್ತ ತನಿಖೆ ನಡೆಸಬೇಕಾಗಿತ್ತು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮೊದಲಿಗೆ ಅನುಮಾನ ಬಂದ ಕಾರಣ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಆದರೆ, ವಶಪಡಿಸಿಕೊಂಡ ವಸ್ತುಗಳನ್ನು ತಕ್ಷಣ ಪರೀಕ್ಷಿಸುವ ಸೌಲಭ್ಯ ಸರ್ಕಾರದ ಬಳಿ ಇರಲಿಲ್ಲ. ಇದರಿಂದ ಸಿಂಗ್ 57 ದಿನ ಜೈಲಿನಲ್ಲಿ ಇರಬೇಕಾಯಿತು. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ನ್ಯಾಯಾಲಯ ಹೇಳಿದೆ.
ಮೊಬೈಲ್ ವಿಧಿವಿಜ್ಞಾನ ಘಟಕ ಮತ್ತು RFSL ಪ್ರಯೋಗಾಲಯಗಳಲ್ಲಿ ಅಗತ್ಯ ಪರೀಕ್ಷೆ ನಡೆಸಲು ಬೇಕಾದ ಸೌಲಭ್ಯಗಳೇ ಇರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.
RFSL ನಲ್ಲಿ ಸ್ಪಷ್ಟ ವರದಿ ನೀಡಲು ಸಾಧ್ಯವಾಗದೇ ಪ್ರಕರಣವನ್ನು ಬಳಿಕ CFSL ಗೆ ಕಳುಹಿಸಲಾಗಿತ್ತು. ಅಲ್ಲಿ ನಡೆದ ಪರೀಕ್ಷೆಯಲ್ಲಿ ಯಾವುದೇ ನಿಷಿದ್ಧ ವಸ್ತುಗಳಿಲ್ಲ ಎಂಬುದು ದೃಢಪಟ್ಟರೂ, ಅದಾಗುವಷ್ಟರಲ್ಲಿ ಸಿಂಗ್ 57 ದಿನ ಜೈಲು ವಾಸ ಅನುಭವಿಸಿದ್ದರು ಎಂದು ನ್ಯಾಯಾಲಯ ತಿಳಿಸಿದೆ.
ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯಾಗಿರುವುದನ್ನು ಗಮನಿಸಿದ ಹೈಕೋರ್ಟ್, ಸಿಂಗ್ ಅವರಿಗೆ ಮೂರು ತಿಂಗಳೊಳಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಇದೇ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಲು, ರಾಜ್ಯದ ಎಲ್ಲಾ ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ ಅಗತ್ಯ ಉಪಕರಣಗಳು ಮತ್ತು ಸಿಬ್ಬಂದಿ ಇದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ.






