ಬಿಹಾರ ಚುನಾವಣಾ ಫಲಿತಾಂಶದ ಕುರಿತು ಆರಂಭವಾದ ವಾಗ್ವಾದ ಯುವಕನ ಕೊಲೆಯಲ್ಲಿ ಅಂತ್ಯ

ಸಾಂದರ್ಭಿಕ ಚಿತ್ರ
ಭೋಪಾಲ್ : ಬಿಹಾರ ಚುನಾವಣಾ ಫಲಿತಾಂಶದ ಕುರಿತ ಚರ್ಚೆಯ ವೇಳೆ ವಾಗ್ವಾದ ನಡೆದು ಯುವಕನೋರ್ವನನ್ನು ಆತನ ಮಾವಂದಿರೇ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಂಟ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಿಹಾರದ ಶಿವಹಾರ್ ಜಿಲ್ಲೆಯ ಕಾರ್ಮಿಕ ಶಂಕರ್ ಮಾಂಝಿ (22) ತನ್ನ ಮಾವ ರಾಜೇಶ್ ಮಾಂಝಿ (25) ಮತ್ತು ತೂಫಾನಿ ಮಾಂಝಿ (27) ಅವರೊಂದಿಗೆ ವಾಸಿಸುತ್ತಿದ್ದ.
ಶಂಕರ್ ಆರ್ಜೆಡಿ ಬೆಂಬಲಿಗನಾಗಿದ್ದ. ಇಬ್ಬರು ಆರೋಪಿಗಳು ಜೆಡಿ(ಯು) ಬೆಂಬಲಿಗರು ಎಂದು ಕ್ಯಾಂಟ್ ಪೊಲೀಸ್ ಠಾಣಾ ಉಸ್ತುವಾರಿ ಅನೂಪ್ ಭಾರ್ಗವ್ ತಿಳಿಸಿದ್ದಾರೆ. ರಾಜೇಶ್ ಮತ್ತು ತೂಫಾನಿ ಸೇರಿ ಶಂಕರ್ ಅವರನ್ನು ಹತ್ತಿರದ ಕೆಸರು ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಬಳಿಕ ರಾಜೇಶ್ ಮತ್ತು ತೂಫಾನಿಯನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ಸಮಯದಲ್ಲಿ ಇಬ್ಬರು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಭಾರ್ಗವ್ ಹೇಳಿದರು. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.





