ಬಿಹಾರ ಸಿಎಂ ನಿತೀಶ್ ಕುಮಾರ್ ಕಾರ್ಯಕ್ರಮ ಸ್ಥಳದ ಗೇಟು ಮುರಿದು ಒಳ ನುಗ್ಗಲು ಯತ್ನಿಸಿದ ನಿತೀಶ್ ಕುಮಾರ್!

ಪಾಟ್ನಾ: ಭದ್ರತಾ ವೈಫಲ್ಯದ ಘಟನೆಯೊಂದರಲ್ಲಿ, ಬಿಹಾರದ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಅವರ ಹೆಸರನ್ನೇ ಹೊಂದಿರುವ ವ್ಯಕ್ತಿಯೊಬ್ಬ, ಕೈಯಲ್ಲಿ ಭಿತ್ತಿ ಪತ್ರವೊಂದನ್ನು ಹಿಡಿದುಕೊಂಡು ಭಾರಿ ಭದ್ರತಾ ಪ್ರದೇಶವನ್ನು ಪ್ರವೇಶಿಸಲು ಯತ್ನಿಸಿರುವ ಘಟನೆ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ನಡೆದಿದೆ ಎಂದು indiatoday.in ವರದಿ ಮಾಡಿದೆ.
ಆ ವ್ಯಕ್ತಿಯನ್ನು 26 ವರ್ಷದ ನಿತೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ನಿಧನರಾಗಿರುವ ಬಿಹಾರ ಮಿಲಿಟರಿ ಪೊಲೀಸ್ ಸಿಬ್ಬಂದಿಯಾದ ತಮ್ಮ ತಂದೆಯ ಬದಲಿಗೆ ಅನುಕಂಪದ ಆಧಾರದಲ್ಲಿ ತನಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬುದು ಆತನ ಆಗ್ರಹವಾಗಿತ್ತು.
ಕೈಯಲ್ಲಿ ತನ್ನ ಆಗ್ರಹದ ವಿವರಗಳಿದ್ದ ಭಿತ್ತಿ ಚಿತ್ರವನ್ನು ಹಿಡಿದುಕೊಂಡಿದ್ದ ಕುಮಾರ್, ಮುಖ್ಯಮಂತ್ರಿಯು ನೆರೆದಿದ್ದ ಸಭೆಯನ್ನುದ್ದೇಶಿಸಿ ಮಾತನಾಡುವಾಗ, ಭಾರಿ ಭದ್ರತೆ ಹೊಂದಿದ್ದ ಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದ್ದಾನೆ. ಆದರೆ, ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಆತನನ್ನು ಅಡ್ಡಗಟ್ಟಿ, ಬಲವಂತವಾಗಿ ಸ್ಥಳದಿಂದ ಹೊರದಬ್ಬಿದ್ದಾರೆ.
ಘಟನೆಯ ಕುರಿತು ಉನ್ನತ ತನಿಖೆಗಾಗಿ ಪಾಟ್ನಾ ಜಿಲ್ಲಾಡಳಿತವು ಆದೇಶಿಸಿದೆ.





