ಮಹಾರಾಷ್ಟ್ರ | ಬೆಳೆ ಹಾನಿ; 2020ನೇ ಸಾಲಿನಲ್ಲಿ ಯುವ ಕೃಷಿಕ ಪ್ರಶಸ್ತಿ ಪುರಸ್ಕೃತ ರೈತ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಬುಲ್ಧಾನ: 2020ನೇ ಸಾಲಿನಲ್ಲಿ ಮಹಾರಾಷ್ಟ್ರ ಸರಕಾರದಿಂದ ‘ಯುವ ಕೃಷಿಕ’ ಪ್ರಶಸ್ತಿಗೆ ಭಾಜನರಾಗಿದ್ದ ರೈತರೊಬ್ಬರು ಬೆಳೆ ನಷ್ಟ ಹಾಗೂ ನೀರಿನ ಸಮಸ್ಯೆಯನ್ನು ತಾಳಲಾರದೆ ಗುರುವಾರ ಬುಲ್ಧಾನ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ರೈತನನ್ನು ಕೈಲಾಶ್ ನಗ್ರೆ (42) ಎಂದು ಗುರುತಿಸಲಾಗಿದ್ದು, ದ್ಯುಯೆಲ್ ಗಾಂವ್ ರಾಜಾ ತಾಲ್ಲೂಕಿನ ಶಿವಾನಿ ಆರ್ಮಲ್ ಜಿಲ್ಲೆಯಲ್ಲಿರುವ ತಮ್ಮ ಹೊಲದಲ್ಲಿ ಇಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಧೇರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, “ನಾಲ್ಕು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಬೆಳೆ ಇಳುವರಿ ಕೊರತೆ ಹಾಗೂ ನೀರಿನ ಸಮಸ್ಯೆ ಕುರಿತು ಉಲ್ಲೇಖಿಸಲಾಗಿದೆ. ಹೊಲಗಳಿಗೆ ನೀರು ಪೂರೈಕೆಯಲ್ಲಿ ಆಗುತ್ತಿರುವ ಕೊರತೆಯನ್ನು ಪರಿಹರಿಸಲು ಸರಕಾರ ಪರಿಹಾರವೊಂದನ್ನು ಕಂಡುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ತಮ್ಮ ಈ ದುಡುಕಿನ ಕೃತ್ಯಕ್ಕೆ ಅವರು ತಮ್ಮ ಮರಣ ಪತ್ರದಲ್ಲಿ ಯಾರನ್ನೂ ಜವಾಬ್ದಾರರನ್ನಾಗಿಸಿಲ್ಲ. 2020ನೇ ಸಾಲಿನಲ್ಲಿ ನಗ್ರೆ ಯುವ ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದರು” ಎಂದು ತಿಳಿಸಿದ್ದಾರೆ.
ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದೂ ಅವರು ಹೇಳಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.