ಮಣಿಪುರ| ಸಿಎಂ ನಿವಾಸಕ್ಕೆ ನಡೆದ ರ್ಯಾಲಿ ವೇಳೆ ಉದ್ವಿಗ್ನ: ಅಶ್ರುವಾಯು ಸೆಲ್ ಸಿಡಿಸಿದ ಭದ್ರತಾ ಪಡೆ

ಸಾಂದರ್ಭಿಕ ಚಿತ್ರ | Photo Credit : PTI
ಇಂಫಾಲ, ಎ. 25: ಮಣಿಪುರ ಸಮಗ್ರತಾ ಸಮನ್ವಯ ಸಮಿತಿ (ಸಿಒಸಿಒಎಂಐ) ಇಂಫಾಲದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ರ್ಯಾಲಿ ಪ್ರತಿಭಟನಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆಯಿಂದ ಉದ್ವಿಗ್ನಗೊಂಡಿತು.
ಅಪರಾಹ್ನ ಸುಮಾರು 1 ಗಂಟೆಗೆ ರ್ಯಾಲಿ ಆರಂಭವಾಯಿತು. ಕಣಿವೆ ಜಿಲ್ಲೆಗಳಾದ್ಯಂತ ಹಲವು ಸ್ಥಳಗಳಲ್ಲಿ ಜನರ ಗುಂಪು ಜಮಾಯಿಸಿತು. ಅನಂತರ 6 ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿಯ್ನು ಸಲ್ಲಿಸಲು ಮುಖ್ಯಮಂತ್ರಿ ಯುಮ್ನುಮ್ ಖೇಮ್ಚಂದ್ ಸಿಂಗ್ ಅವರ ನಿವಾಸಕ್ಕೆ ರ್ಯಾಲಿ ನಡೆಸಿತು.
ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಕಾರರು ಜಮಾಯಿಸಿದ್ದ ಖ್ವೇರಾಂಬಂದ್ ಇಮಾ ಕೈಥೆಲ್-ಮದರ್ ಮಾರ್ಕೆಟ್ ಸಮೀಪ ಪರಿಸ್ಥಿತಿ ವಿಶೇಷವಾಗಿ ಉದ್ವಿಗ್ನವಾಗಿತ್ತು. ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದ ತಮ್ಮ ಪ್ರತಿನಿಧಿಗಳನ್ನು ಪ್ರತಿಭಟನಕಾರರು ಅಲ್ಲಿ ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಕಾರರನ್ನು ಚದುರಿಸುವ ಪ್ರಯತ್ನವಾಗಿ ಭದ್ರತೆ ಪಡೆಗಳು ಅಶ್ರುವಾಯು ಸೆಲ್ಗಳನ್ನು ಸಿಡಿಸಿತು ಎಂದು ಮೂಲಗಳು ತಿಳಿಸಿವೆ.




