‘ಸ್ವಯಂ ಆಡಳಿತ ’ ಘೋಷಿಸಿದ್ದ ಐಟಿಎಲ್ಎಫ್ ವಿರುದ್ಧ ಕಾನೂನು ಕ್ರಮಕ್ಕೆ ಮಣಿಪುರ ಸರಕಾರದ ನಿರ್ಧಾರ

ಸಾಂದರ್ಭಿಕ ಚಿತ್ರ | Photo: PTI
ಇಂಫಾಲ : ಕುಕಿ-ರೆ ಸಮುದಾಯದ ಪ್ರಾಬಲ್ಯವಿರುವ ರಾಜ್ಯದ ಮೂರು ಜಿಲ್ಲೆಗಳಲ್ಲಿ ‘ಸ್ವಯಂ ಆಡಳಿತ ’ಸ್ಥಾಪನೆಗೆ ಗಡುವು ನೀಡಿದ್ದಕ್ಕಾಗಿ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್)ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮಣಿಪುರ ಸರಕಾರವು ನಿರ್ಧರಿಸಿದೆ.
ತೆಂಗನೌಪಾಲ್,ಕಾಂಗ್ಪೊಕ್ಪಿ ಮತ್ತು ಚುರಾಚಂದ್ರಪುರ ಈ ಮೂರು ಜಿಲ್ಲೆಗಳಾಗಿವೆ. ಐಟಿಎಲ್ಎಫ್ ನ ‘ಸ್ವಯಂ ಆಡಳಿತ’ದ ಎಚ್ಚರಿಕೆಯನ್ನು ಹೇಳಿಕೆಯಲ್ಲಿ ಬಲವಾಗಿ ಖಂಡಿಸಿರುವ ಮಣಿಪುರ ಸರಕಾರವು,ಈ ಬೆದರಿಕೆಯು ರಾಜ್ಯದಲ್ಲಿಯ ವಾತಾವರಣವನ್ನು ಕಲುಷಿತಗೊಳಿಸುವ ಹಾಗೂ ಕಾನೂನು ಮತ್ತು ಸುವ್ಯಸ್ಥೆಗೆ ಅಡ್ಡಿಯನ್ನುಂಟು ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.
ಐಟಿಎಲ್ಎಫ್ ಹೇಳಿಕೆಗೆ ಯಾವುದೇ ಕಾನೂನಾತ್ಮಕ ಅಥವಾ ಸಾಂವಿಧಾನಿಕ ಆಧಾರವಿಲ್ಲ. ಅದು ಪ್ರೇರೇಪಿತವೆಂಬಂತೆ ಕಂಡು ಬರುತ್ತಿದೆ. ಅದರ ಹಾಗೂ ಸಂಬಂಧಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದೂ ಸರಕಾರವು ತಿಳಿಸಿದೆ.
‘ಪ್ರತ್ಯೇಕ ಆಡಳಿತ’ದ ತನ್ನ ಬೇಡಿಕೆಯನ್ನು ಎರಡು ವಾರಗಳಲ್ಲಿ ಈಡೇರಿಸದಿದ್ದರೆ ಕುಕಿ-ರೆ ಪ್ರಾಬಲ್ಯದ ಜಿಲ್ಲೆಗಳಲ್ಲಿ ‘ಸ್ವಯಂ ಆಡಳಿತ ’ವನ್ನು ಸ್ಥಾಪಿಸುವುದಾಗಿ ಐಟಿಎಲ್ಎಫ್ ಬುಧವಾರ ಹೇಳಿಕೆಯಲ್ಲಿ ತಿಳಿಸಿತ್ತು.





